ಉಗರಗೋಳ: ಮನುಕುಲದ ಉದ್ಧಾರಕ್ಕಾಗಿ ಶರಣರು, ಸಂತರು, ಮಹಾತ್ಮರ ಕೊಡುಗೆ ಅಪಾರ ಎಂದು ಉಗರಗೋಳ ರಾಮಾರೂಢಮಠದ ಬ್ರಹ್ಮಾರೂಢ ಸ್ವಾಮೀಜಿ ಹೇಳಿದ್ದಾರೆ.
ಗ್ರಾಮದಲ್ಲಿ ಶ್ರೀಗುರು ನಿರ್ವಾಣೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ, ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಮಹೋತ್ಸವ ಹಾಗೂ ತಮ್ಮ 75ನೆಯ ಹುಟ್ಟುಹಬ್ಬದ ವಜ್ರ ಮಹೋತ್ಸವ ಆಚರಣೆ ಸಮಾರಂಭದಲ್ಲಿ ಮಾತನಾಡಿದರು.
ಮಾನವನ ಅಜ್ಞಾನದ ಅಂಧಕಾರವನ್ನು ಗುರುವಿನಿಂದ ಮಾತ್ರ ಹೋಗಲಾಡಿಸಲು ಸಾಧ್ಯ ಎಂದ ಅವರು, ಅಂತಹ ಗುರುವನ್ನು ಪಡೆದು ಸುಖಮಯ ಜೀವನ ಸಾಗಿಸಿ ಎಂದು ಕರೆ ನೀಡಿದರು.
ಕಟ್ನೂರ ಹುಬ್ಬಳ್ಳಿ ವಿರಕ್ತಮಠದ ಜ್ಞಾನಯೋಗಿ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯನ ಬದುಕಿನ ಗತಿ ಬದಲಿಸುವ ಹಾಗೂ ಮತಿ ಶುದ್ಧಿ ಮಾಡುವ ಶಕ್ತಿ ಗುರುವಿನಲ್ಲಿದೆ ಎಂದರು.
ಉಗರಗೋಳ ನಿರ್ವಾಣೇಶ್ವರಮಠದ ಪೀಠಾಧ್ಯಕ್ಷ ಶ್ರೀಗುರುಮಹಾಂತ ಸ್ವಾಮೀಜಿ ಮಾತನಾಡಿ, ಭಾರತದ ಯುವಕರು ಮನರಂಜನೆಗೆ ಮಾರುಹೋಗದೆ ಅಧ್ಯಾತ್ಮದತ್ತ ಒಲವು ತೋರುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಬಾಗಲಕೋಟೆ ಸೀಮಿಕೇರಿಯ ರಾಮಾರೂಢ ಮಠದ ಪರಮಹಂಸ ಪರಮರಾಮಾರೂಢ ಸ್ವಾಮೀಜಿ, ಚುಳಕಿಯ ಶಿವಾನಂದ ಸ್ವಾಮೀಜಿ, ಚಿಕ್ಕುಂಬಿಯ ಅಭಿನವ ಅಜಾತನಾಗಲಿಂಗ ಶ್ರೀಗಳು, ಧಾರವಾಡದ ಸರೋವರನಗರದ ಚಂದ್ರಶೇಖರ ಸ್ವಾಮೀಜಿ ಇತರರು ಇದ್ದರು.