ರಾಮನಗರ: ಬೆಂಗಳೂರು ಜಿಲ್ಲಾ ಕೇಂದ್ರ ಬ್ಯಾಂಕ್ನ ರಾಮನಗರ, ಚನ್ನಪಟ್ಟಣ ತಾಲೂಕು ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕ್ರಮವಾಗಿ ವೈ.ಎಚ್ ಮಂಜು ಮತ್ತು ಕುಕ್ಕೂರುದೊಡ್ಡಿ ಜಯರಾಮು ಗೆಲುವು ಸಾಧಿಸಿದ್ದಾರೆ. ವೈ.ಎಚ್.ಮಂಜು 10 ಮತ ಪಡೆದರೆ, ಪ್ರತಿಸ್ಪರ್ಧಿ ಎಚ್.ಎಸ್.ಸಿದ್ದರಾಜು 8 ಮತಗಳನ್ನು ಪಡೆದರು. ಚನ್ನಪಟ್ಟಣ ತಾಲೂಕು ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಕ್ಕೂರು ದೊಡ್ಡಿ ಜಯರಾಮು 13 ಮತಗಳನ್ನು ಪಡೆದರೆ, ಲಿಂಗೇಶ್ ಕುಮಾರ್ 7 ಮತಗಳನ್ನು ಪಡೆದರು. ಬೆಂಗಳೂರಿನ ಮರಾಠ ಹಾಸ್ಟೆಲ್ ಆವರಣದಲ್ಲಿ ಚುನಾವಣೆ ನಡೆದು ಸಂಜೆ ವೇಳೆಗೆ ಮತ ಎಣಿಕೆಯೂ ಪೂರ್ಣಗೊಂಡಿತು.
ಈ ವೇಳೆ ಮಾತನಾಡಿದ ರಾಮನಗರ ತಾಲೂಕು ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ವೈ.ಎಚ್.ಮಂಜು, ನನ್ನ ಗೆಲುವಿಗೆ ಸಹಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಜಿಪಂ ಅಧ್ಯಕ್ಷ ಎಚ್.ಎನ್.ಅಶೋಕ್ ಮತ್ತು ಕಾಂಗ್ರೆಸ್ ಮುಖಂಡರಿಗೆ ಅಭಿನಂದಿಸುತ್ತೇನೆ. ನನ್ನ ಅಧಿಕಾರ ಅವಧಿಯಲ್ಲಿ ರೈತ ಪರವಾದ ಕೆಲಸ ಮಾಡುವ ಮೂಲಕ ಸಹಕಾರಿ ಕ್ಷೇತ್ರದ ಮಹತ್ವ ಹೆಚ್ಚಿಸುವುದಾಗಿ ತಿಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಉಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಅರೇಹಳ್ಳಿ ಗಂಗಾಧರ್, ರಾಮಚಂದ್ರು, ಇಟ್ಟಮಡು ರಮೇಶ್, ಜೀವನ್ ಬಾಬು, ವೀರಭದ್ರಯ್ಯ ಮಂಚಯ್ಯ, ವಸಂತ, ಅಪ್ಪಾಜಿ ಹೂಂಬಾಳಯ್ಯ ವಿನಯ್, ಶರತ್ ಮತ್ತಿತರರು ಇದ್ದರು.