ಉಪ್ಪಳ: ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೂ ಮೌಲ್ಯ ಕಲ್ಪಿಸಿ ಸಾಧ್ಯವಾದಷ್ಟು ಬೆಂಬಲ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು. ಮಂಗಲ್ಪಾಡಿ ಸರ್ಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಮಂಗಳವಾರ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಮಂಗಲ್ಪಾಡಿ ಗ್ರಾಪಂ ಅಧ್ಯಕ್ಷೆ ರುಬೀನಾ ನೌಫಲ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿವೈಎಸ್‌ಪಿ ಸುನೀಲ್ ಕುಮಾರ್ ಸಿ.ಕೆ, ಜಿ.ಪಂ. ಸದಸ್ಯ ರಹ್ಮಾನ್, ಉದ್ಯಮಿ ಅಬ್ದುಲ್ ಲತೀಫ್, ಮಂಜೇಸ್ವರ ಬ್ಲಾ.ಪಂ. ಉಪಾಧ್ಯಕ್ಷ ಹನೀಫ್ ಪಿ.ಕೆ, ಕಣ್ಣೂರು ವಲಯ ಆರ್.ಡಿ.ಡಿ. ರಾಜೇಶ್ ಕುಮಾರ್, ಕಾಸರಗೋಡು ಡಿಡಿಇ ಮಧುಸೂದನನ್ ಟಿ.ವಿ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಉಪಸ್ಥಿತರಿದ್ದರು. ಪ್ರಾಂಶುಪಾಲ ಶ್ರೀಕುಮಾರ್ ಎಂ.ಎ. ಸ್ವಾಗತಿಸಿದರು. ಸ್ವಾಗತ ಸಮಿತಿ ಕನ್ವೀನರ್ ಹಸೀನ ಎನ್.ಎ. ವಂದಿಸಿದರು.
ಹಸಿರು ಕಸದ ತೊಟ್ಟಿ
ಮಂಗಲ್ಪಾಡಿ ಶಾಲಾ ಆವರಣ(ಐಲ), ಎಜೆಐ ಶಾಲೆ ಹಾಗೂ ಲಯನ್ಸ್ ಸೇವಾ ಮಂದಿರ ನಯಾಬಝಾರ್‌ನಲ್ಲಿ ಉಪಜಿಲ್ಲಾ ವ್ಯಾಪ್ತಿಯ 98 ಶಾಲೆಗಳ 5 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ನಾಲ್ಕು ದಿನಗಳ ಕಲೋತ್ಸವದಲ್ಲಿ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ವೇದಿಕೆ ಹಾಗೂ ವೇದಿಕೆಯೇತರ ವಿಭಾಗಳಲ್ಲಿ 356 ಸ್ಪರ್ಧೆಗಳು ನಡೆಯುತ್ತಿವೆ. ಗುರುವಾರ ಸಂಜೆ ಸಮಾರೋಪ ನಡೆಯಲಿದೆ. ಹಸಿರು ಕೇರಳ ಮಿಷನ್ ನಿರ್ದೇಶಾನುಸಾರ ಕಲೋತ್ಸವ ನಡೆಯುವ ಎಲ್ಲ ವೇದಿಕೆಗಳ ಸುತ್ತ ತೆಂಗಿನ ಗರಿಗಳಿಂದ ಹಸಿರು ಕಸತೊಟ್ಟಿ ನಿರ್ಮಿಸಲಾಗಿದೆ.