ಬೆಳಗಾವಿ: ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರವನ್ನು ಮಾರಾಟ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪಿಎಸ್‌ಐ ವಿಠ್ಠಲ ಹಾವಣ್ಣವರ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ನಗರದ ಪಾಂಗೂಳ್ ಗಲ್ಲಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಭಾನುವಾರ ಭೇಟಿ ನೀಡಿ ಮಾಂಜಾ ದಾರ ಮಾರದಂತೆ ಅಗತ್ಯ ಜಾಗೃತಿ ಮೂಡಿಸಿದರು.
ಶಾಲಾ, ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಸಮಯ ಕಳೆಯಲು ಯುವಕರು ಮಾಂಜಾ ದಾರ ಬಳಸಿದ ಗಾಳಿಪಟ ಹಾರಿ ಬಿಡುತ್ತಿದ್ದಾರೆ. ಈ ವೇಳೆ ತುಂಡಾದ ದಾರ ಎಲ್ಲೆಂದರಲ್ಲಿ ಅಡ್ಡಲಾಗಿ ಬೀಳುತ್ತಿದೆ. ಬೈಕ್ ಸವಾರರು ಹಾಗೂ ಸೈಕಲ್ ಸವಾರರು ಈ ದಾರಗಳಿಗೆ ಸಿಲುಕಿ ಬಿದ್ದು ಗಾಯಗೊಳ್ಳುತ್ತಿದ್ದಾರಲ್ಲದೆ, ಒಂದೆರಡು ಕಡೆಗಳಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಜೀವಕ್ಕೆ ಮಾರಕವಾಗುವ ಮಾಂಜಾ ದಾರವನ್ನು ಮಾರಾಟ ಮಾಡಬಾರದು. ಒಂದು ವೇಳೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಂಗಡಿಕಾರರಿಗೆ ಪೊಲೀಸರು ಎಚ್ಚರಿಕೆ ನೀಡಿದರು.