ಬಳ್ಳಾರಿ : ಮಣಿಪುರದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಸೃಷ್ಟಿಸಬೇಕು, ಗಲಭೆಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಎಐವೈಎಫ್ ಹಾಗೂ ಸಿಪಿಐ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಎಐವೈಎಫ್ ಜಿಲ್ಲಾಧ್ಯಕ್ಷ ಕಟ್ಟೆ ಬಸಪ್ಪ ಮಾತನಾಡಿ, ಮಣಿಪುರದಲ್ಲಿ ಎದ್ದಿರುವ ದಾಂಧಲೆ, ಗಲಭೆ, ಹಿಂಸಾಚಾರಕ್ಕೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು. ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಮಣಿಪುರದ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎ.ಆದಿಮೂರ್ತಿ ಮಾತನಾಡಿ, ಮಣಿಪುರದಲ್ಲಿ ಕಳೆದ ಸುಮಾರು ದಿನಗಳಿಂದ ಹಿಂಸಾಚಾರ, ಗಲಭೆ, ದಾಂಧಲೆ ಸೇರಿದಂತೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಘಟನೆಯ ನೈತಿಕ ಹೊಣೆಹೊತ್ತು ಮಣಿಪುರದ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತಿರುವ ಗಸಗಸೆ ಕೃಷಿಯನ್ನು ತಡೆಯಬೇಕು. ಅಕ್ರಮ ವಲಸೆ ಬರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಮಣಿಪುರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಜನರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಹಾಗೂ ಔಷಧವನ್ನು ಸರಬರಾಜು ಮಾಡಬೇಕು. ಸಂತ್ರಸ್ತ ಕುಟುಂಬದವರಿಗೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಖಂಡರಾದ ಕೊಳಗಲ್ಲ ಮಲ್ಲಪ್ಪ, ಈರಣ್ಣ, ಮುಕ್ಕಣ್ಣ, ಕಲ್ಯಾಣ ಗೌಡ, ವಿರೇಶ್, ಮಾರೇಶ್, ವಿಶ್ವನಾಥ ಸ್ವಾಮಿ, ಅಡಿವೆಪ್ಪ, ಸೇರಿದಂತೆ ಎಐವೈಎಫ್ ಹಾಗೂ ಸಿಪಿಐ ಕಾರ್ಯಕರ್ತರು ಭಾಗವಹಿಸಿದ್ದರು.