ದಾವಣಗೆರೆ: ಮಣಿಪುರ ದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಆಗಸ್ಟ್ 9ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಅಂದು ಬೆಳಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಅರೆಬೆತ್ತಲೆ ಮೆರವಣಿಗೆ ಹೊರಟು ಜಯದೇವ ವೃತ್ತ ಹಾಗೂ ಗಾಂಧಿ ಸರ್ಕಲ್ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಒಕ್ಕೂಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಒಕ್ಕೂಟದ ಸಂಚಾಲಕ, ಹಿರಿಯ ವಕೀಲ ಅನೀಸ್ ಪಾಷಾ ತಿಳಿಸಿದ್ದಾರೆ.
ಘಟನೆ ನಡೆದ ಸುಮಾರು 80 ದಿನಗಳ ನಂತರ ವಿಡಿಯೋ ವೈರಲ್ ಆಗಿ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬಳಿಕ ಆಡಳಿತ ಯಂತ್ರ ಎಚ್ಚೆತ್ತು ಅದರ ಬಗ್ಗೆ ಗಮನಹರಿಸಿರುವುದು ಶೋಚನೀಯ ಸಂಗತಿ. ಕೆಲವು ರಾಜಕೀಯ ಶಕ್ತಿಗಳು ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಜಾತಿ ಜಾತಿಗಳ ನಡುವೆ ದ್ವೇಷ ಬಿತ್ತಿ ಇಡೀ ಸಮುದಾಯವನ್ನೇ ಹಾಳುಗೆಡಹುವ ಕ್ರತ್ಯ ಖಂಡನೀಯ ಎಂದರು.
ಇಂತಹ ಕೃತ್ಯಗಳು ದೇಶದಲ್ಲಿ ನಡೆಯದಂತೆ ಕೇಂದ್ರ ಮತ್ತು ಮಣಿಪುರ ಸರ್ಕಾರಕ್ಕೆ ಎಚ್ಚರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಪ್ರಗತಿಪರ ಸಂಘಟನೆಗಳು ಸೇರಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ರಚಿಸಿ ಘಟನೆ ಖಂಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಡಿ. ತಿಪ್ಪಣ್ಣ ಕತ್ತಲಗೆರೆ, ಮಲ್ಲೇಶಪ್ಪ, ಸಿ. ಬಸವರಾಜ್, ಡಿ. ಹನುಮಂತಪ್ಪ , ಎಚ್. ನಿಂಗಪ್ಪ, ವಕೀಲರಾದ ಜಸ್ಟಿನ್ ಜೈ ಕುಮಾರ್, ಹನೀಫ್ ಸಾಬ್, ಕೆ. ಭಾರತಿ, ಸಂಕಮ್ಮ, ಸುಜಾತ, ಜೆ. ಮರುಳಪ್ಪ, ಜಿ.ಎನ್. ಸತ್ಯಪ್ಪ, ಜಿ.ಎಸ್. ಲೋಕೇಶ್, ಬಿ. ದಾದಾಪೀರ್, ಎಚ್.ಸಿ. ಮಲ್ಲಪ್ಪ, ಸಂಗನಗೌಡ್ರು, ಶ್ರೀನಿವಾಸ್, ಚಂದ್ರಪ್ಪ, ಇಸ್ಮಾಯಿಲ್ ಇತರರು ಸಭೆಯಲ್ಲಿ ಭಾಗವಹಿಸಿದ್ದರು.