ಉಡುಪಿ: ಸ್ಥಳೀಯ ಸಂಸ್ಥೆಗೆ ಚುನಾಯಿತರಾಗುವ ಮೂಲಕ ತಳಮಟ್ಟದ ರಾಜಕೀಯದಿಂದ ಬೆಳೆದು ಬಂದ ಡಾ.ವಿ.ಎಸ್.ಆಚಾರ್ಯ ಅವರು ಪಕ್ಷದ ಬೆಳವಣಿಗೆಯಲ್ಲಿ ಕೊಡುಗೆ ನೀಡಿದ್ದಾರೆ. ಉಡುಪಿ-ಮಣಿಪಾಲ ಭಾಗದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗಿನ ರಸ್ತೆಗೆ ಡಾ.ವಿ.ಎಸ್.ಆಚಾರ್ಯ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ಡಾ.ಆಚಾರ್ಯ ಜನ್ಮದಿನ ಅಂಗವಾಗಿ ಮಂಗಳವಾರ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಕೆ.ರಘುಪತಿ ಭಟ್ ಮಾತನಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಕಿದಿಯೂರು, ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ನಗರ ಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಆಚಾರ್ಯ ಅವರ ಪುತ್ರರಾದ ಡಾ. ಕಿರಣ್ ಆಚಾರ್ಯ, ಡಾ.ರವಿರಾಜ್ ಆಚಾರ್ಯ ಉಪಸ್ಥಿತರಿದ್ದರು.