ಜಿಲ್ಲೆ

ಭಾರತದಲ್ಲಿ 1 ಮಿ. ಯುನಿಟ್​ ರಕ್ತ ಕೊರತೆ: ರಶ್ಮಿ

ಉಡುಪಿ: ಭಾರತದಲ್ಲಿ 1 ಮಿಲಿಯನ್​ ಯುನಿಟ್​ ರಕ್ತದ ಕೊರತೆಯಿದ್ದು, ಒಂದು ಯುನಿಟ್​ ರಕ್ತವು 3 ಜೀವಗಳನ್ನು ಉಳಿಸುತ್ತದೆ. ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಅದನ್ನು ದಾನದ ಮೂಲಕವೇ ಅವಶ್ಯವಿದ್ದವರಿಗೆ ಪೂರೈಸಬೇಕಾಗಿದೆ. ಆದ್ದರಿಂದ ಎಲ್ಲಾ ಅರ್ಹ ದಾನಿಗಳು ರಕ್ತ ದಾನ ಮಾಡುವುದರ ಮೂಲಕ ಇತರರ ಜೀವ ಉಳಿಸಲು ಸಹಕರಿಸಬೇಕು ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್​.ಆರ್​. ಹೇಳಿದರು.

ಶುಕ್ರವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕೆಎಂಸಿ ಡೀನ್​ ಡಾ.ಪದ್ಮರಾಜ್​ ಹೆಗ್ಡೆ ಮಾತನಾಡಿ, ಪ್ರತಿ ಎರಡು ಸೆಕೆಂಡ್ಸ್​ಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದೆ. ಒಬ್ಬ ಆರೋಗ್ಯವಂತ 18ನೇ ವರ್ಷಕ್ಕೆ ರಕ್ತ ದಾನ ಆರಂಭಿಸಿ ವರ್ಷಕ್ಕೆ 3 ಬಾರಿಯಂತೆ 60 ವರ್ಷಕ್ಕೆ 30 ಗ್ಯಾಲನ್​ ರಕ್ತ ದಾನ ಮಾಡಿ, ಕನಿಷ್ಠ 500 ಜನರ ಜೀವ ಉಳಿಸಬಹುದು ಎಂದರು.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಯ ಸಿಒಒ ಡಾ.ಆನಂದ್​ ವೇಣುಗೋಪಾಲ್​ ಅತಿಥಿಗಳಾಗಿದ್ದರು. ಕೆಎಂಸಿ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್​ ಶೆಟ್ಟಿ, ರಕ್ತ ಕೇಂದ್ರದ ಮುಖ್ಯಸ್ಥೆ ಡಾ.ಶಮೀ ಶಾಸ್ತ್ರಿ, ರಕ್ತ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಗಣೇಶ್​ ಮೋಹನ್​ ಉಪಸ್ಥಿತರಿದ್ದರು.

ರಕ್ತದಾನಿಗಳ ಪ್ರೇರಕರನ್ನು, ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದ ಅತ್ಯುತ್ತಮ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಕೆಎಂಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಲೋಗನ್​ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶ್ವೇಶ ಎನ್​. ರಕ್ತದಾನಿಗಳ ಪ್ರೇರಕರ ಪಟ್ಟಿ ಓದಿದರು. ಡಾ. ಚೆನ್ನ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.