ಜಿಲ್ಲೆ

ಯಕ್ಷಗಾನ ಕಲಾವಿದರಿಗೆ ಮಣಿಪಾಲ ಹೆಲ್ತ್​ ಕಾರ್ಡ್​ ಘೋಷಣೆ

ಸಹಕುಲಾಧಿಪತಿ ಡಾ.ಎಚ್​.ಎಸ್​. ಬಲ್ಲಾಳ ಮಾಹಿತಿ

ಡಾ. ರಾಮದಾಸ ಎಂ. ಪೈ ಜನ್ಮದಿನದ ನಿಮಿತ್ತ ಕೊಡುಗೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಎಲ್ಲರ ಆರೋಗ್ಯ ರಕ್ಷಣೆ, ಕಾಳಜಿಗಾಗಿ ಕಸ್ತೂರ್ಬಾ ಆಸ್ಪತ್ರೆಯು ಹಲವಾರು ವರ್ಷದಿಂದ ಮಣಿಪಾಲ ಆರೋಗ್ಯ ಕಾರ್ಡ್​ ಸೌಲಭ್ಯ ಒದಗಿಸುತ್ತಿದೆ. ಅಸಂಖ್ಯಾತ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಕರಾವಳಿಯ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ತೊಡಗಿಕೊಂಡು, ಕಲೆಯ ಮೌಲ್ಯ ಹೆಚ್ಚಿಸುತ್ತಿರುವ ಕಲಾವಿದರಿಗೂ ಸಹ ಈ ಕಾರ್ಡ್​ ನೀಡಲಾಗುವುದು ಎಂದು ಮಾಹೆಯ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ ತಿಳಿಸಿದರು.

ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಷನ್​ (ಮಾಹೆ)ನ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ 90ನೇ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ, ಕರಾವಳಿಯ ಎಲ್ಲ ಯಕ್ಷಗಾನ ಕಲಾವಿದರಿಗೆ ಮಣಿಪಾಲ ಆರೋಗ್ಯ ಕಾರ್ಡ್​ ನೀಡುವುದಾಗಿ ಸಂಸ್ಥೆ ಘೋಷಿಸಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಾಹೆಯ ವೈಸ್​ ಚಾನ್ಸೆಲರ್​ ಲೆ.ಜ. (ಡಾ.) ಎಂ.ಡಿ. ವೆಂಕಟೇಶ, ಪ್ರೊ ವೈಸ್​ ಚಾನ್ಸೆಲರ್​ (ತಂತ್ರಜ್ಞಾನ ಮತ್ತು ವಿಜ್ಞಾನ) ಡಾ. ನಾರಾಯಣ ಸಭಾಹಿತ, ಪ್ರೊ ವೈಸ್​ ಚಾನ್ಸೆಲರ್​ (ಆರೋಗ್ಯ ವಿಜ್ಞಾನ) ಡಾ. ಶರತ್​ ರಾವ್​, ಮಾಹೆಯ ರಿಜಿಸ್ಟ್ರಾರ್​ ಗಿರಿಧರ ಕಿಣಿ, ಮಣಿಪಾಲ ಸಮೂಹ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ ಕಂಟಿಪುಡಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಇತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ದಿಗ್ಗಜರಾದ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್​ನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಮಾಹೆಯ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಿ.ಕಿಶನ್​ ಹೆಗ್ಡೆ, ಭುವನಪ್ರಸಾದ್​ ಹೆಗ್ಡೆ, ಸುಧಾಕರ ಆಚಾರ್ಯ ಹಾಗೂ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.

ಯಕ್ಷಗಾನ ಕಲಾವಿದರಿಗೆ ತ್ವರಿತ ಮತ್ತು ಪರಿಣಾಮಕಾರಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಮಣಿಪಾಲ ಆರೋಗ್ಯ ಕಾರ್ಡ್​ ಸೌಲಭ್ಯ ನೀಡಲಾಗುತ್ತಿದೆ. ಈ ಕ್ರಮವು ಸಮುದಾಯದ ಕಲ್ಯಾಣ ಹಾಗೂ ಪ್ರಾದೇಶಿಕ ಕಲಾ ಪ್ರಕಾರದ ಸಂರಕ್ಷಣೆಯಲ್ಲಿ ಮಾಹೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಮಹತ್ವದ ನಿರ್ಧಾರದಲ್ಲಿ ಮಾಹೆ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ ದೂರದೃಷ್ಟಿತ್ವವಿದೆ. | ಡಾ. ಅವಿನಾಶ ಶೆಟ್ಟಿ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ.