ಉಡುಪಿ: ಕೇಂದ್ರ ಸರ್ಕಾರ ಎಂಎಸ್ ಎಂಇ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ, ಇನೋವೇಶನ್ ಸಂಸ್ಕೃತಿಗೆ ಉತ್ತೇಜನ ನೀಡುತ್ತಿದೆ. ಕಳೆದ ವರ್ಷ 126 ಪೇಟೆಂಟ್ಗಳನ್ನು ಖಚಿತಪಡಿಸಲಾಗಿದ್ದು, 1387 ಟ್ರೇಡ್ ಮಾರ್ಕಗಳಿಗೆ ಅನುಮತಿ ನೀಡಲಾಗಿದೆ. ಸಣ್ಣ ಕೈಗಾರಿಕೆಗಳು ಭಾರತದ ಅರ್ಥಿಕತೆಯ ಬೆನ್ನೆಲುಬಾಗಿದ್ದು, ಇದರಿಂದಾಗಿ ಅನೇಕ ಉದ್ಯಮಗಳು ಉಳಿದುಕೊಂಡಿವೆ. 2013-14ನೇ ಸಾಲಿನ ಬಜೆಟ್ನಲ್ಲಿ ಯುಪಿಎ ಸರ್ಕಾರ ಎಂಎಸ್ ಎಂ ಇ ವಲಯಕ್ಕೆ 3286 ಕೋಟಿ ರೂ. ನಿಗದಿ ಮಾಡಿದ್ದು, 2023-24ನೇ ಬಜೆಟ್ನಲ್ಲಿ ನಮ್ಮ ಸರ್ಕಾರ 22138 ಕೋಟಿ ರೂ. ಅನುದಾನ ನೀಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲ ಖಾಸಗಿ ಹೋಟೆಲ್ನಲ್ಲಿ ಅಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆ ಬಗ್ಗೆ ಉಪನ್ಯಾಸ ನೀಡಿದರು.
ಕಾಂಗ್ರೆಸ್ 50 -60 ವರ್ಷದಲ್ಲಿ ಗರೀಬಿ ಹಠಾವೋ ಹೇಳುತ್ತಾ ಬರುತ್ತಿದೆ. ಅದರೆ ಬಿಜೆಪಿ ಸರ್ಕಾರ ನಿಜವಾಗಿ ಬಡವರ ಏಳಿಗೆ ಅಯುಷ್ಮಾನ್ ಭಾರತ್, ಜಲಜೀವನ್ ಮಿಷನ್, ಉಜ್ವಲಾ, ಜನೌಷಧಿ ವಿತರಣೆ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದೆ. ಎಲ್ಲರನ್ನು ಒಳಗೊಳ್ಳುವಂತ ಉತ್ತಮ ಆಡಳಿತ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದ್ದು, ಈ ಹಣವನ್ನು ಜನಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ ಎಂದು ಹೇಳಿದರು.
ಪಾಶ್ಚಿಮಾತ್ಯ ಮಾಧ್ಯಮಗಳು ಭಾರತವನ್ನು ನಕರಾತ್ಮಕವಾಗಿ ಚಿತ್ರಿಸುತ್ತಿದ್ದರೂ ಗ್ಲೋಬಲ್ ಚಾಲೆಂಜ್‌ಗಳನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿದೆ. ಹೀಗಾಗಿ ವಿಶ್ವದ ಪ್ರಮುಖ ರಾಷ್ಟçಗಳ ಸರ್ಕಾರಗಳು ಭಾರತದ ಶಕ್ತಿಯನ್ನು ಗುರುತಿಸುತ್ತಿವೆ. ಈಸ್ ಅರ್ಫ ಡೂಯಿಂಗ್ನಲ್ಲಿ ಭಾರತ 2014ರಲ್ಲಿ 142ನೇ ಸ್ಥಾನದಲ್ಲಿತ್ತು. ಈಗ 62ನೇ ಸ್ಥಾನದಲ್ಲಿದೆ. ಕಂಪೆನಿ ಕಾನೂನಿಗೆ ಬದಲಾವಣೆ ತರಲಾಗಿದ್ದು, ಉದ್ಯಮಿಗಳನ್ನು ಕ್ರಿಮಿನಲ್ ಕೇಸ್ಗಳ ಭಯದಿಂದ ಮುಕ್ತ ಮಾಡಲಾಗಿದೆ ಎಂದರು.
7,27,000 ಅದಾಯದವರೆಗೆ ಯಾವುದೇ ತೆರಿಗೆ ಇಲ್ಲದಿರುವುದು ಮಧ್ಯಮ ವರ್ಗಕ್ಕೆ ಅನುಕೂಲಕರವಾಗಿದೆ. ಪ್ರಧಾನಿ ವಿದೇಶ ಪ್ರವಾಸ ಸಂದರ್ಭದಲ್ಲಿ ಅಯಾ ದೇಶದ ಸರ್ಕಾರಗಳೊಡನೆ ಭಾರತದ ಲೆಕ್ಕಪರಿಶೋಧಕರು, ಇಂಜಿನಿಯರ್, ವೈದ್ಯರು, ನರ್ಸಿಂಗ್ ಸಹಿತ ಪದವಿ ಶಿಕ್ಷಣ ಪಡೆದವರಿಗೆ ಉದ್ಯೋಗಳಲ್ಲಿ ಮಾನ್ಯತೆ ನೀಡುವಂತೆ ಕೋರಿಕೆ ಸಲ್ಲಿಸುವುದು ಪ್ರಮುಖ ವಿಷಯವಾಗಿರುತ್ತದೆ ಎಂದು ಹೇಳಿದರು. ನಂತರ ಸಚಿವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ರಘುಪತಿ ಭಟ್, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಪ್ರಬುದ್ಧರ ಪ್ರಕೋಷ್ಠ ಸಂಚಾಲಕ ಪಾಂಡುರ0ಗ ಗಾಂವ್ಕರ್, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಧ್ಯಕ್ಷ ಮಹೇಶ್ ಠಾಕೂರ್ ಉಪಿಸ್ಥಿತರಿದ್ದರು.