ಜಿಲ್ಲೆ

ಮಣಿಪಾಲ ಆರೋಗ್ಯ ಕಾರ್ಡ್​ ಬಿಡುಗಡೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಗ್ರಾಮೀಣ ಪ್ರದೇಶದಲ್ಲಿ ಬಡಜನರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಣಿಪಾಲ ಆರೋಗ್ಯ ಕಾರ್ಡ್​ ರೂಪಿಸಲಾಗಿದ್ದು, ಕಳೆದ 25 ವರ್ಷದಲ್ಲಿ ಲಾಂತರ ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಹೇಳಿದರು.

ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಮಾಹೆ ) ವತಿಯಿಂದ ಬಿಡುಗಡೆಗೊಳಿಸಲಾದ ಮಣಿಪಾಲ ಆರೋಗ್ಯ ಕಾರ್ಡ್​ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

2000ನೇ ಇಸವಿಯಲ್ಲಿ 3,200 ಕುಟುಂಬಗಳ ನೋಂದಣಿಯೊಂದಿಗೆ ಪ್ರಾರಂಭವಾದ ಮಣಿಪಾಲ ಆರೋಗ್ಯಕಾರ್ಡ್​ ಯೋಜನೆ ಕಳೆದ ಹಣಕಾಸು ವರ್ಷದಲ್ಲಿ 1.25 ಲಕ್ಷ ಕುಟುಂಬಗಳ 6.72 ಲಕ್ಷ ಸದಸ್ಯರು ನೋಂದಣಿ ಮಾಡಿಕೊಳ್ಳುವ ಮೂಲಕ ಜನೋಪಯೋಗಿಯಾಗಿ ಹೊರಹೊಮ್ಮಿದೆ. ಕಾರ್ಡ್​ದಾರರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರು ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆಗಳು, ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ, ಗೋವಾದ ಮಣಿಪಾಲ ಆಸ್ಪತ್ರೆ, ಮಂಗಳೂರಿನ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿ ಪ್ರಯೋಜನ ಪಡೆಯಬಹುದು ಎಂದರು.

ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್​ ಜನರಲ್​ (ಡಾ.) ಎಂ.ಡಿ. ವೆಂಕಟೇಶ್​, ಮಾಹೆಯ ಸಹ ಉಪಕುಲಪತಿ ಡಾ. ಶರತ್​ ಕೆ. ರಾವ್​ ಮಾತನಾಡಿದರು. ಮಣಿಪಾಲದ ಕೆಎಂಸಿ ಡೀನ್​ ಡಾ. ಅನಿಲ್​ ಕೆ. ಭಟ್​, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್​ ವೇಣುಗೋಪಾಲ್​ ಉಪಸ್ಥಿತರಿದ್ದರು.