ವಿಟ್ಲ: ಧರ್ಮ, ಕರ್ತವ್ಯ ಪ್ರಜ್ಞೆಯಿಂದ ಪ್ರತಿಯೊಬ್ಬರು ನಡೆಯುವ ಜತೆಗೆ ಪರಿಸರ ಸ್ವಚ್ಛವಾಗಿದ್ದಾಗ ಸಾಮಾಜ ಸನ್ಮಾರ್ಗದಿಂದ ಸಾಗುತ್ತದೆ. ಮಕ್ಕಳಲ್ಲಿ ಜಗತ್ತಿನ ಶಕ್ತಿ ಅಡಕವಾಗಿದ್ದು, ಪೋಷಕರು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಬೇಕಾಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಯ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾನವೀಯ ಮೌಲ್ಯ ಜೀವನದಲ್ಲಿ ಹೆಚ್ಚಾಗಬೇಕಾಗಿದ್ದು, ದೇಶ ಪ್ರೇಮವನ್ನು ತುಂಬುವ ಕಾರ್ಯ ನಡೆಯಬೇಕು. ಮಾಡುವ ಕರ್ಮಗಳು ಉತ್ತಮವಾಗಿದ್ದಾಗ ಶ್ರೇಷ್ಠ ಫಲ ಲಭಿಸುತ್ತದೆ. ದೇಶದ ನಿಧಿಯಾದ ಯುವಕ ಶಕ್ತಿಯನ್ನು ಸಂಪತ್ತಾಗಿಸುವ ಹೊಣೆ ಎಲ್ಲರ ಮೇಲಿದೆ ಎಂದು ತಿಳಿಸಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಶ್ರೀರಾಮ ಭಟ್, ಡಾ. ಮೀರಾ ಶ್ರೀರಾಮ ಭಟ್, ಸಾಮಾಜಿಕ ಕಾರ್ಯಕರ್ತ ಶಿವ ಕಾಮತ್ ಮಂಗಳೂರು, ಕುಲ ಕಸುಬುದಾರಿಕೆಯ ಸುರೇಶ್ ಕುಮಾರ್ ಕನ್ಯಾನ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿದರು. ಅಶ್ವಿತ್ ಕುಲಾಲ್ ಪಡಂಗಡಿ ಕಾರ್ಯಕ್ರಮ ನಿರೂಪಿಸಿದರು.