ಜಿಲ್ಲೆ

ಮಾಣಿಲ ಶ್ರೀಧಾಮ ಸಮಾಜ ಸೇವೆಗೆ ಮೀಸಲು - ಮಾಣಿಲ ಶ್ರೀ

Mangaluru - Nishantha Narayana

ವಿಟ್ಲ: ಸೇವಾ ಮನೋಭಾವ ಪ್ರತಿಯೊಬ್ಬರಲ್ಲಿ ಮೂಡಿದಾಗ ಸಮಾಜದಲ್ಲಿ ಪರಿವರ್ತನೆಯನ್ನು ಕಾಣಬಹುದು. ಸಮಾಜ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ಲೋಕಾರ್ಪಣೆಯಾದ ಮಾಣಿಲ ಕ್ಷೇತ್ರದಲ್ಲಿ ಸಂಸ್ಕಾರಯುತ ಬದುಕು ನೀಡುವ ನಿಟ್ಟಿನಲ್ಲಿ ಬಾಲ ಭೋಜನ ಕಾರ್ಯವನ್ನು ಪ್ರಾರಂಭ ಮಾಡಲಾಗಿದೆ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಗುರುವಾರ ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ವಿಶೇಷ ಸಂಭ್ರಮದ ಅಂಗವಾಗಿ 48ದಿನಗಳ ಕಾಲ ನಡೆದ ದತ್ತಯಾಗ, ಬಾಲಭೋಜನ ಸಮಾಪ್ತಿಯ ಸಂದರ್ಭ ಆಶೀರ್ವಚನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ತಾಯಿ ಮೇಲೆ ನಡೆಯುತ್ತಿರುವ ಆಕ್ರಮಣದ ವಿರುದ್ಧ ಸೆಟೆದು ನಿಲ್ಲಬೇಕಾಗಿದೆ. ಆಡಳಿತ ಅವ್ಯವಸ್ಥೆಯಿಂದ ಜಗತ್ತಿನಲ್ಲಿ ತಲೆಯೆತ್ತಲಾಗದ ಪರಿಸ್ಥಿತಿ ಇಂದು ಬದಲಾಗಿದೆ. ಭಾರತದಲ್ಲಿ ವಿಜ್ಞಾನದಿಂದ ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯಜ್ಞೇಶ್ವರ ಬರ್ಕೆ, ಯು. ರಾಮ ಉಪ್ಪಿನಂಗಡಿ, ಸಚ್ಚೀಂದ್ರ ಅಮೀನ್ ಬರ್ಕೆ ಅವರನ್ನು ಸಮ್ಮಾನಿಸಲಾಯಿತು. ಶ್ರೇಯಾ ಚೌಟ ಅವರನ್ನು ಗೌರವಿಸಲಾಯಿತು. ಛದ್ಮವೇಷ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಯಿತು. ಅಧ್ಯಕ್ಷತೆಯನ್ನು ಉಡುಪಿ ಕೊಡವೂರು ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಅಧ್ಯಕ್ಷ ಕೊಡವೂರು ದಿವಾಕರ ಶೆಟ್ಟಿ ವಹಿಸಿದ್ದರು.

ಮಾಣಿಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ ಭಟ್ ದೇಲಂತಮಜಲು, ಉಡುಪಿ ನಿತ್ಯಾನಂದ ಮಠ ಟ್ರಸ್ಟ್‌ನ ಉದಯ ಕುಮಾರ್, ಪುದು ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಬಂಟ್ವಾಳ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಕಾರ್ಯದರ್ಶಿ ಚೆನ್ನಕೇಶವ, ಕೃಷ್ಣಪ್ಪ ಕಣ್ವತೀರ್ಥ, ಸಂತೋಷ್ ಕುಮಾರ್ ರೈ ಬೋಳಿಯಾರು, ಬೆಳ್ಳಿಹಬ್ಬ ಪ್ರಧಾನ ಸಮಿತಿಯ ಅಧ್ಯಕ್ಷ ಮೋನಪ್ಪ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ಗೀತಾ ಪುರುಷೋತ್ತಮ, ರೇಶ್ಮಾ ಮನೋಹರ್ ಪ್ರಾರ್ಥಿಸಿದರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ನಳಿನಾಕ್ಷಿ ಛದ್ಮವೇಷ ಸ್ಪರ್ಧೆ ವಿಜೇತರ ಪಟ್ಟಿ ವಾಚಿಸಿದರು. ಅಶ್ವಿತ್ ಕುಲಾಲ್ ಪಡಂಗಡಿ ವಂದಿಸಿದರು. ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.