ಎಸ್.ರಾಜು ಪಾಂಡವಪುರ
ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ಅಲಂಕಾರಕ್ಕಾಗಿ ಕೊಂಡೊಯ್ಯುತ್ತಿದ್ದ ವಜ್ರ ಖಚಿತ ವೈರಮುಡಿ ಕಿರೀಟದಿಂದ ಒಂದು ಮಾಣಿಕ್ಯದ ಹರಳು ಕಳಚಿ ಬಿದ್ದ ನೆಲೆಯೇ ‘ಮಾಣಿಕ್ಯನಹಳ್ಳಿ’ ಗ್ರಾಮವಾಗಿದೆ…!
ಮೇಲುಕೋಟೆ ಯೋಗಾನರಸಿಂಹಸ್ವಾಮಿ ಬೆಟ್ಟದ ಸುಂದರ ಪರಿಸರದಲ್ಲಿ ಧನುಷ್ಕೋಟಿಗೆ ಹೊಂದಿಕೊಂಡಂತಿರುವ ಈ ಸುಂದರ ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಬಹುದು. ಹಿಂದೆ ಈ ಗ್ರಾಮವನ್ನು ‘ಕಳ್ಳಿಕೊಪ್ಪಲು’ ಎಂದು ಕರೆಯಲಾಗುತ್ತಿತ್ತು.
ಚೆಲುವನಾರಾಯಣಸ್ವಾಮಿಯ ವಜ್ರಖಚಿತ ವೈರಮುಡಿ ಕಿರೀಟವನ್ನು ಗ್ರಾಮದ ಮಾರ್ಗವಾಗಿ ಮೇಲುಕೋಟೆ ದೇವಸ್ಥಾನಕ್ಕೆ ಕೊಂಡೊಯ್ಯುವಾಗ ಕಿರೀಟದಲ್ಲಿದ್ದ ಮಾಣಿಕ್ಯದ ಹರಳೊಂದು ಗ್ರಾಮದ ಹೊಸಬಾವಿ ಎಂಬ ಸ್ಥಳದಲ್ಲಿ ಕಳೆದು ಹೋಯಿತ್ತಂತೆ. ಮಾಣಿಕ್ಯ ಕೆಳಗೆ ಬಿದ್ದ ದಿನದಿಂದಲೇ ಈ ಗ್ರಾಮದ ಹೆಸರು ‘ಮಾಣಿಕ್ಯನಹಳ್ಳಿ’ ಯಾಗಿ ಬದಲಾಯಿತು ಎಂಬುದು ಗ್ರಾಮದ ಹಿರಿಯರು ಮತ್ತು ಇತಿಹಾಸ ತಿಳಿದಿರುವವರ ಮಾತು.
ಜಾನಪದ ಹಿನ್ನೆಲೆ: ಇತ್ತೀಚಿನ ದಿನಗಳಲ್ಲಿ ವೈರಮುಡಿ ಬ್ರಹೋತ್ಸವ ಮುಗಿದ ಬಳಿಕ ಕಿರೀಟವನ್ನು ಜಿಲ್ಲಾ ಖಜಾನೆಯಲ್ಲಿ ಇಟ್ಟು ಮುಂದಿನ ವರ್ಷದ ಬ್ರಹೋತ್ಸವದ ವೇಳೆಗೆ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಸಾಂಪ್ರದಾಯಿಕವಾಗಿ ದೇವಸ್ಥಾನಕ್ಕೆ ತರಲಾಗುತ್ತದೆ. ಆದರೆ ಹಿಂದೆ ರಾಜಪ್ರಭುತ್ವದಲ್ಲಿ ಅತ್ಯಮೂಲ್ಯವಾದ ವಜ್ರಖಚಿತ ವೈರಮುಡಿ ಕಿರೀಟವನ್ನು ಮೈಸೂರು ಅರಮನೆಯ ತಿಜೋರಿಯಲ್ಲಿ ಇರಿಸಲಾಗುತ್ತಿತ್ತು. ಅಲ್ಲಿಂದ ಪ್ರತಿವರ್ಷ ವೈರಮುಡಿ ಬ್ರಹ್ಮೋತ್ಸವ ವೇಳೆ ಅರಮನೆಯ ಗಜ ಪಡೆ, ಅಶ್ವದಳ ಹಾಗೂ ಸೈನಿಕರ ಬಿಗಿ ಭದ್ರತೆಯಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ ಮಾರ್ಗವಾಗಿ ಮೇಲುಕೋಟೆಗೆ ತರಲಾಗುತ್ತಿತ್ತಂತೆ. ಈ ವೇಳೆ ಮಾರ್ಗದುದ್ದಕ್ಕೂ ಸಿಗುವ ಪ್ರತಿ ಗ್ರಾಮದಲ್ಲಿಯೂ ಭಕ್ತರು ವೈರಮುಡಿ ಕಿರೀಟಕ್ಕೆ ಪೂಜೆ ಸಲ್ಲಿಸಿ ಬೀಳ್ಕೊಡುತ್ತಿದ್ದರು. ಅಂತೆಯೇ ಈಗಿನ ಮಾಣಿಕ್ಯನಹಳ್ಳಿ ಹಾಗೂ ಹಿಂದಿನ ಕಳ್ಳಿಕೊಪ್ಪಲು ಗ್ರಾಮಕ್ಕೆ ಆಗಮಿಸಿದ ಕಿರೀಟಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಬೀಳ್ಕೊಡುವಾಗ ಕಿರೀಟದಲ್ಲಿದ್ದ ಮಾಣಿಕ್ಯದ ಹರಳು ಬಿದ್ದು ಹೋಯಿತು ಎಂಬ ಹಿನ್ನೆಲೆಯಲ್ಲಿ ಅಂದಿನಿಂದ ‘ಕಳ್ಳಿಕೊಪ್ಪಲು’ ‘ಮಾಣಿಕ್ಯನಹಳ್ಳಿ’ಯಾಗಿ ಬದಲಾಯಿತು ಎಂಬುದು ಜಾನಪದವಾಗಿ ಕೇಳಿಬಂದಿದೆ.
‘ದೇವಸ್ಥಾನಗಳ ಗ್ರಾಮ’: ಭೌಗೋಳಿಕವಾಗಿ ಸಾಕಷ್ಟು ವಿಸ್ತಾರವಾಗಿಲ್ಲದಿದ್ದರೂ, ಇತಿಹಾಸದ ಪುಟಗಳಲ್ಲಿ ಈ ಗ್ರಾಮ ತನ್ನದೇ ಆದ ಛಾಪು ಮೂಡಿಸಿದೆ. ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಈ ಗ್ರಾಮಕ್ಕೆ ತನ್ನದೇ ಐತಿಹ್ಯವಿದ್ದು ‘ದೇವಸ್ಥಾನಗಳ ಗ್ರಾಮ’ ವೆಂದು ಕರೆಯಬಹುದಾಗಿದೆ. ಗ್ರಾಮದಲ್ಲಿ ಜೋಳರ ಕಾಲದ ಬಾಲಭೈರವೇಶ್ವರ ದೇವಸ್ಥಾನವಿದೆ. ಇತ್ತೀಚೆಗೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ದೇವಸ್ಥಾನವನ್ನು ಸ್ಥಳಾಂತರಿಸಿ ಜೀರ್ಣೋದ್ಧಾರ ಮಾಡಿದ್ದಾರೆ. ಗ್ರಾಮದಲ್ಲಿ ಪಟ್ಟಲದಮ್ಮ, ಮಾಸ್ತಮ್ಮ, ಹಿರಿಯಮ್ಮ, ಸಂತಾನ ಲಕ್ಷ್ಮೀ, ಧನಲಕ್ಷ್ಮೀ ಹಾಗೂ ಮಾರಮ್ಮ ದೇವಸ್ಥಾನಗಳು ಸೇರಿದಂತೆ ಅಷ್ಟಲಕ್ಷ್ಮೀಯರ ದೇಗುಲಗಳು ಇವೆ. ಹೀಗಾಗಿಯೇ ಗ್ರಾಮಕ್ಕೆ ‘ದೈವ ಕೃಪೆ’ ಇದೆ ಎಂದು ಹಿರಿಯರು ಹೇಳುತ್ತಾರೆ.
ಶಿಕ್ಷಣಕ್ಕೆ ಹೆಚ್ಚು ಒತ್ತು: ಗ್ರಾಮದ ಜನರ ಮುಖ್ಯ ಕಸಬು ವ್ಯವಸಾಯವಾಗಿದ್ದು, ಭತ್ತ, ಕಬ್ಬು, ರಾಗಿ, ಹೂ ಹಾಗೂ ತರಕಾರಿಗಳನ್ನು ಬೆಳೆಯಲಾಗುತ್ತದೆ. ಗ್ರಾಮದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದು, ಬಹಳಷ್ಟು ಜನ ವಿದ್ಯಾವಂತರಾಗಿ ಸರ್ಕಾರಿ ಹುದ್ದೆ ಪಡೆದುಕೊಂಡಿದ್ದಾರೆ. ಪಾಂಡವಪುರ ತಾಲೂಕಿನ ಇತರ ಹಳ್ಳಿಗಳಿಗೆ ಹೋಲಿಸಿದರೆ ಈ ಗ್ರಾಮದಲ್ಲಿ ಶಿಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ.
ಹಬ್ಬದ ವಾತಾವರಣ: ವೈರಮುಡಿ ಕಿರೀಟಕ್ಕೂ ಗ್ರಾಮಕ್ಕೂ ಅವಿನಾಭಾವ ಸಂಬಂಧವಿರುವ ಕಾರಣ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವದ ಅಷ್ಟು ದಿನಗಳು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಅಂದು ಚೆಲುವನಾರಾಯಣಸ್ವಾಮಿ ಅಲಂಕಾರಕ್ಕೆ ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ತೆರಳುವ ವೈರಮುಡಿ ಮತ್ತು ರಾಜಮುಡಿ ಕಿರೀಟ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರೆಲ್ಲ ಒಗ್ಗೂಡಿ ಕಿರೀಟಕ್ಕೆ ಸಂಪ್ರದಾಯದಂತೆ ಪೂಜೆ ಕೈಂಕರ್ಯ ಸಲ್ಲಿಸುತ್ತಾರೆ. ಅಂದು ಗ್ರಾಮದ ಮುಖ್ಯರಸ್ತೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಭಕ್ತರಿಗೆ ಕೊಸಂಬರಿ, ಮಜ್ಜಿಗೆ ಹಾಗೂ ಪಾನಕ ವಿತರಿಸಿ ಸಂಭ್ರಮಿಸಲಾಗುತ್ತದೆ.
ಮಾಣಿಕ್ಯನಹಳ್ಳಿ ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ. ‘ದಕ್ಷಿಣ ಬದರಿ’ ಎಂದೇ ಹೆಸರಾಗಿರುವ ಮೇಲುಕೋಟೆ ಹಾಗೂ ಗ್ರಾಮಕ್ಕೆ ಅವಿನಾಭಾವ ಸಂಬಂಧ ಇದೆ. ನಮ್ಮ ಪೂರ್ವಿಕರೆಲ್ಲರೂ ಗ್ರಾಮದ ಹೆಸರಿನ ಹಿನ್ನೆಲೆಯನ್ನು ತಿಳಿಸಿ ಹೋಗಿದ್ದಾರೆ. ಗ್ರಾಮದಲ್ಲಿ ಹತ್ತಾರು ದೇವಸ್ಥಾನಗಳಿದ್ದು, ದೇಗುಲಗಳ ಗ್ರಾಮವೆಂದು ಕರೆಯಬಹುದುದಾಗಿದೆ. ಇಲ್ಲಿರುವ ದೇವಸ್ಥಾನಗಳು ಬೇರ‌್ಯಾವ ಗ್ರಾಮಗಳಲ್ಲೂ ಕಾಣಸಿಗುವುದಿಲ್ಲ.
> ನವೀನ್, ಬಾಲಬೈರೇವೇಶ್ವರ ದೇವಸ್ಥಾನದ ಎರಡನೇ ಅರ್ಚಕ.
ಮಾಣಿಕ್ಯನಹಳ್ಳಿ ನಿಜಕ್ಕೂ ಪ್ರಾಕೃತಿಕವಾಗಿ ಸುಂದರವಾಗಿರುವ ಗ್ರಾಮ. ಮೇಲುಕೋಟೆ ಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಕ್ಕೆ ದೈವ ಕೃಪೆಯೂ ಒಲಿದಿದೆ. ಗ್ರಾಮ ಬಹುತೇಕ ಶಿಕ್ಷಿತ ವರ್ಗದಿಂದಲೇ ಕೂಡಿದ್ದು, ಸಾಕಷ್ಟು ವಿದ್ಯಾವಂತರು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಉಳಿದಂತೆ ವ್ಯವಸಾಯ ಪ್ರಧಾನ ಗ್ರಾಮವಾಗಿದ್ದು, ಹೇಮಾವತಿ ನಾಲೆಯಿಂದ ಒಂದು ಬೆಳೆಗೆ ನೀರು ಸಿಗುತ್ತದೆ. ಉಳಿದಂತೆ ಕೆರೆ-ಕಟ್ಟೆಗಳನ್ನು ತುಂಬಿಸಿಕೊಂಡು ಕೊಳವೆ ಬಾವಿ ಹಾಗೂ ಮಳೆ ಆಶ್ರಯದಲ್ಲಿ ವಾಣಿಜ್ಯ ಮತ್ತು ಆಹಾರ ಬೆಳೆಗಳನ್ನು ಬೆಳೆಯಲಾಗುತ್ತದೆ.
> ಅಶೋಕ್, ಮಾಣಿಕ್ಯನಹಳ್ಳಿ, ಪಾಂಡವಪುರ
ಮಾರ್ಗ: ಪಾಂಡವಪುರ ಪಟ್ಟಣದಿಂದ 15 ಕಿ.ಮೀ, ಮಂಡ್ಯದಿಂದ 33 ಕಿ.ಮೀ. ಅಂತರದಲ್ಲಿರುವ ಈ ಗ್ರಾಮ ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದೆ.