ಮೈಸೂರು: ಧ್ರುವನಾರಾಯಣ ಒಬ್ಬ ರಾಜಕೀಯದ ಮಾಣಿಕ್ಯ. ಮೌನವಾಗಿದ್ದುಕೊಂಡೇ ಎಲ್ಲರ ಮನಸ್ಸು ಗೆದ್ದವರು. ಅಭಿವೃದ್ಧಿ ಕೆಲಸವನ್ನು ಮಾಡಿ ಮನೆ ಮಾತಾಗಿದ್ದವರು ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ಕರ್ನಾಟಕ ದಲಿತ ವೇದಿಕೆ ವತಿಯಿಂದ ಜೆಎಲ್‌ಬಿ ರಸ್ತೆಯ ಇಂಜಿನಿಯರ್ಸ್ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧ್ರುವನಾರಾಯಣ ಅವರು ಇಷ್ಟು ಬೇಗ ಕಾಲವಾಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕಳೆದ 25 ವರ್ಷದ ರಾಜಕಾರಣದಲ್ಲಿ ಸಣ್ಣ ಕಪ್ಪು ಚುಕ್ಕೆಗೂ ಒಳಗಾಗದೆ ಸೇವೆ ಸಲ್ಲಿಸಿದ ಅವರು, ಕಳೆದ ಚುನಾವಣೆಯಲ್ಲಿ ಸೋತ ಬಳಿಕ ನಾಲ್ಕು ವರ್ಷ ರಾಜ್ಯ ಪ್ರವಾಸ ಮಾಡಿ ಪಕ್ಷ, ಸಮಾಜ, ಸಮುದಾಯ ಕಟ್ಟುವ ಕೆಲಸ ಮಾಡಿ ನಮ್ಮೆಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದರು ಎಂದರು.
ಯಾವುದೇ ಒಂದು ಜಾತಿಗೆ ಸೀಮಿತವಾಗದೆ, ಭ್ರಷ್ಟಾಚಾರದ ಸೋಂಕಿಗೆ ತುತ್ತಾಗದೇ ಸರ್ವರನ್ನೂ ಒಳಗೊಂಡ ಜನನಾಯಕರಾಗಿ ಆರ್.ಧ್ರುವನಾರಾಯಣ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಸಂಸದರಾಗಿ 10 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಕಾರಣ ಚಾಮರಾಜನಗರ ಜಿಲ್ಲೆಯ ಚಿತ್ರ ಬದಲಾಗಿದೆ. ಶಿಕ್ಷಣ, ಧಾರ್ಮಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಉತ್ತಮ ಶಿಕ್ಷಣ ದೊರೆತರೆ ಉದ್ಯೋಗ ಪಡೆಯಬಹುದು ಎಂದು ಅರಿತು ಚಾಮರಾಜನಗರದಲ್ಲಿ ವಿವಿಧ ಕಾಲೇಜು ಸ್ಥಾಪಿಸಲು ಕ್ರಮ ಕೈಗೊಂಡರು. ಚಾಮರಾಜನಗರದಲ್ಲಿ ದೊಡ್ಡದಾದ ಬುದ್ಧ ವಿಹಾರ ಕಟ್ಟಲು ಮುಂದಾಗಿದ್ದರು. ಅದು ಪ್ರಗತಿಯಲ್ಲಿದೆ. ಅವರ ಪುತ್ರ ದರ್ಶನ್‌ಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಬೆಂಬಲ ನೀಡಬೇಕು. ಆತ್ಮಸಾಕ್ಷಿಗೆ ಕುಂದುಂಟಾಗದಂತೆ ಅವರ ಶ್ರೇಯಸ್ಸಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ದರ್ಶನ್ ಧ್ರುವನಾರಾಯಣ ಮಾತನಾಡಿ, ನಿಮ್ಮೆಲ್ಲರ ಸಹಕಾರ, ನಾಯಕರ ಮಾರ್ಗದರ್ಶನದಲ್ಲಿ ನಾನು ತಂದೆಯವರ ದಾರಿಯಲ್ಲೇ ಸಾಗುತ್ತೇನೆ. ಬುದ್ಧ, ಬಸವ, ಅಂಬೇಡ್ಕರ್ ತತ್ವ-ಸಿದ್ಧಾಂತ ಅಳವಡಿಸಿಕೊಂಡು, ಸೇವೆ ಮಾಡುವ ಮೂಲಕ ತಂದೆಯ ಹೆಸರನ್ನು ಉಳಿಸುತ್ತೇವೆ ಎಂದರು.
ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಮುಖಂಡರಾದ ಜವರಪ್ಪ, ಕೃಷ್ಣಮೂರ್ತಿ ಚಮರಂ, ಗಾಯಕ ಅಮ್ಮ ರಾಮಚಂದ್ರ ಉಪಸ್ಥಿತರಿದ್ದರು.