ಮಡಿಕೇರಿ:
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಪ್ರಣಾಳಿಕೆಯಲ್ಲಿ ಶೇ.೯೮ರಷ್ಟು ಆಶ್ವಾಸನೆಗಳು ಈಡೇರಿದೆ ಎಂದು ಜಿಲ್ಲಾ ಬಿಜೆಪಿ ನಿಯೋಜಿತ ಅಧ್ಯಕ್ಷ ಎನ್.ಎಂ. ರವಿಕಾಳಪ್ಪ ಹೇಳಿದರು. ಭಾರತದ ಸ್ವಾಭಿಮಾನ, ಆತ್ಮಗೌರವ ಏರಿಕೆಯಾಗುವ ರೀತಿಯಲ್ಲಿ ಮೋದಿ ಸರ್ಕಾರ ಆಡಳಿತ ನಡೆಸಿದೆ. ಕಾಶ್ಮೀರ ವಿಷಯ, ರಾಮಮಂದಿರದಂತರ ಸೂಕ್ಷ್ಮ ಮತ್ತು ತುರ್ತು ಸಂದರ್ಭಗಳಲ್ಲಿ ಕೆಲವು ತೀರ್ಮಾನಗಳನ್ನು ಯಶಸ್ವಿಯಾಗಿ ತೆಗದುಕೊಳ್ಳಲಾಗಿದೆ. ಕಾಂಗ್ರೆಸ್‌ಗೆ ಇದನ್ನು ಸಹಿಸಲು ಆಗುತ್ತಿಲ್ಲ. ಹಾಗಾಗಿ ಕೋಮುಗಲಭೆಗೆ ಪ್ರಚೋದನೆ ಕೊಡಲಾಗುತ್ತಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಕೆರೆಗೋಡುವಿನಲ್ಲಿ ಹನುಮ ಧ್ವಜ ಇಳಿಸಲಾಗಿದೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಇಂಥ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯ ಸರ್ಕಾರದ ಉಚಿತ ಭಾಗ್ಯಗಳು ಎಷ್ಟು ಪ್ರಮಾಣದಲ್ಲಿ ಜನರಿಗೆ ತಲುಪಿದೆ ಎನ್ನುವುದರ ವಿಮರ್ಶೆ ಮಾಡಬೇಕಿದೆ. ಅನ್ನಭಾಗ್ಯದಲ್ಲಿ ೫ ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ. ಇದರಲ್ಲಿ ರಾಜ್ಯದ ಪಾಲು ಏನಿದೆ ? ಮಹಿಳೆಯರಿಗೆ ಉಚಿತ ಪ್ರಯಾಣದ ಘೋಷಣೆಗಳನ್ನು ಮಾಡಿ ಬಹುತೇಕ ಬಸ್‌ಗಳ ಸಂಚಾರ ರದ್ದು ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು, ವಯೋವೃದ್ಧರಿಗೆ ಸಮಸ್ಯೆ ಆಗಿದೆ. ಉಚಿತ ೨೦೦ ಯೂನಿಟ್ ವಿದ್ಯುತ್ ಕೂಡ ಸರಿಯಾಗಿ ತಲುಪುತ್ತಿಲ್ಲ. ಬಿಲ್ ಪಾವತಿ ಮಾಡುವವರಿಗೆ ೩ ಪಟ್ಟು ದರ ಹೆಚ್ಚಿಸಲಾಗಿದೆ. ಯುವ ನಿಧಿ ಯೋಜನೆ ಭರವಸೆಯಾಗಿಯೇ ಉಳಿದಿದೆ. ರೈತರಿಗೆ ಕೊಡುತ್ತಿದ್ದ ೪ ಸಾವಿರ ರೂ. ನಿಲ್ಲಿಸಲಾಗಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೂ ಕೊಡುತ್ತಿಲ್ಲ.
ಮೈಸೂರು - ಕುಶಾಲನಗರ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಸಹಕಾರ ಕೊಡುತ್ತಿಲ್ಲ. ಈ ಯೋಜನೆಗೆ ಡಿಪಿಆರ್ ಮಾಡಲಾಗಿದ್ದು, ೩೦೯೨ ಕೋಟಿ ರೂ. ಅಂದಾಜಿಸಲಾಗಿದೆ. ಲೋಕಸಭಾ ಚುನಾವಣೆಗೆ ಸನ್ನದ್ಧರಾಗಿದ್ದು, ಯಾವುದೇ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಪಕ್ಷದಿಂದ ಗ್ರಾಮ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಯೋಧ್ಯೆಗೆ ೧೦೦ ಕಾರ್ಯಕರ್ತರನ್ನು ಕಳಿಸಲಾಗುವುದು. ಕರಸೇವಕರು, ಹಿರಿಯ ಬಿಜೆಪಿ ನಾಯಕರಿಗೆ ಅವಕಾಶ ಕೊಡಲಾಗುತ್ತಿದೆ ಎಂದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಮಾದಪ್ಪ ಮಾತನಾಡಿ ಶುಕ್ರವಾರ (ಫೆ.೨) ಮಡಿಕೇರಿ ಕಾವೇರಿ ಹಾಲ್‌ನಲ್ಲಿ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಮತ್ತು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಪ್ರತಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ವಿಧಾನಪರಿಷತ್ತು ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ವಕ್ತಾರ ಮಹೇಶ್ ಜೈನಿ, ನಗರ ಮಂಡಲ ಅಧ್ಯಕ್ಷ ಮನುಮಂಜುನಾಥ್ ಇದ್ದರು.