ಮೈಸೂರು: ಮೂರು ದಿನಗಳ ಮಾವು ಹಾಗೂ ಹಲಸು ಮೇಳಕ್ಕೆ ನಗರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಾಪ್ಸ್‌ಕಾಮ್ಸ್ ಸಹಯೋಗದಲ್ಲಿ ಹಾರ್ಡಿಂಜ್ ವೃತ್ತದ ಬಳಿ ಇರುವ ಕುಪ್ಪಣ್ಣ ಪಾರ್ಕ್‌ನಲ್ಲಿ 12ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಹಣ್ಣು ಒಂದೇ ಸೂರಿನಡಿ ಲಭ್ಯವಿದೆ.
ಮಾವು, ಹಲಸು ಪ್ರದರ್ಶನ ಹಾಗೂ ಮಾರಾಟಕ್ಕಾಗಿ 35 ಮಳಿಗೆಗಳನ್ನು ತೆರೆಯಲಾಗಿದ್ದು, ರೈತರಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗಿದೆ. ಮೈಸೂರು, ರಾಮನಗರ, ಮಂಡ್ಯ ಜಿಲ್ಲೆಯ ರೈತರು ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ತಂದಿದ್ದಾರೆ. ಪ್ರತಿಯೊಂದು ಮಳಿಗೆಗಳ ಮುಂದೆ ದರ ಪಟ್ಟಿ ಹಾಕಲಾಗಿದ್ದು, ಗ್ರಾಹಕರಿಗೆ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಸೂಚಿಸಲಾಗಿದೆ.
ಮೇಳಕ್ಕೆ ಮಾವು ಖರೀದಿಸುವ ಮೂಲಕ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಮೂರು ದಿನಗಳ ಮಾವು ಮತ್ತು ಹಲಸಿನ ಮೇಳ ಆಯೋಜಿಸಿರುವುದರಿಂದ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ. ಈ ಬಾರಿ ಇಳುವರಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಮಾವು ಕಡಿಮೆಯಾಗಿದೆ ಎಂದರು.
ಹೀಗಾಗಿ ರೈತರಿಂದ ನೇರವಾಗಿ ಗ್ರಾಹಕರು ಖರೀದಿಸಲಿ ಎಂಬ ಕಾರಣಕ್ಕೆ ಈ ಮೇಳ ಆಯೋಜಿಸಲಾಗಿದೆ. ಮಾರುಕಟ್ಟೆಯಲ್ಲಿ ಮಾವು ಖರೀದಿ ಮಾಡಲು ಹಿಂಜರಿಯುವ ಗ್ರಾಹಕರು ಇಲ್ಲಿಗೆ ಬಂದು ಕೊಳ್ಳಬಹುದು. ನೈಸರ್ಗಿಕವಾಗಿ ಹಣ್ಣು ಮಾಡಿರುವುದರಿಂದ ಆರೋಗ್ಯಕಾರಿಯಾಗಿವೆ. ಅಲ್ಲದೇ ಮಧ್ಯವರ್ತಿಗಳಿಲ್ಲದೇ ರೈತರೇ ನೇರವಾಗಿ ಮಾವು ತರುವುದರಿಂದ ಹೆಚ್ಚು ಬೆಲೆ ಇರುವುದಿಲ್ಲ ಎಂದು ಹೇಳಿದರು.
ಗ್ರಾಹಕರು ರೈತರನ್ನು ಪ್ರೋತ್ಸಾಹಿಸಲು ಮಾವು ಮೇಳಕ್ಕೆ ಆಗಮಿಸಿ ಖರೀದಿಸಬಹುದು. ಮೈಸೂರು, ಮಂಡ್ಯ, ರಾಮನಗರ, ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಿಗುವಂತಹ ಮಾವಿನ ಹಣ್ಣುಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲಾಗುತ್ತಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬರುತ್ತಿರುವುದರಿಂದ ಹೆಚ್ಚಿನ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಉಪ ನಿರ್ದೇಶಕ ಡಾ.ಮಂಜುನಾಥ ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ 3,047 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದ್ದು, ಪ್ರತಿ ವರ್ಷ 30 ರಿಂದ 35 ಸಾವಿರ ಟನ್ ಮಾವು ಉತ್ಪಾದನೆಯಾಗುತ್ತಿತ್ತು. ಆದರೆ, ಈ ಬಾರಿ ವಾತಾವರಣದಲ್ಲಿನ ಉಷ್ಣತೆ ಹೆಚ್ಚಳ ಹಾಗೂ ಬಿಸಿ ಗಾಳಿಯ ಪರಿಣಾಮ ಮಾವಿನ ಹೂ ಉದುರಿದ್ದು ಶೇ.50 ಫಸಲು ನಾಶವಾಗಿದೆ ಎಂದರು.
ಕಳೆದ ಬಾರಿಯ ಮೇಳದಲ್ಲಿ 150 ಟನ್ ಮಾವಿನ ಹಣ್ಣ ಮಾರಾಟವಾಗಿತ್ತು. ಈ ಬಾರಿ ಮತ್ತಷ್ಟು ಹೆಚ್ಚಾಗುವ ಸಾಧ್ಯೆತೆ ಇದೆ. ಯಾವುದೇ ರಾಸಾಯನಿಕ ಬಳಸದೆ ನೈಸರ್ಗಿಕವಾಗಿ ಹಣ್ಣು ಮಾಡಿದ ಮಾವು ಮೇಳದಲ್ಲಿ ಮಾರಾಟವಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಇದ್ದರು.
ಸಸ್ಯ ಸಂತೆ
ಮೇಳದಲ್ಲಿ ಸರ್ಕಾರದ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹಿಸಲು ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಸ್ಯ ಸಂತೆಯನ್ನು ಸಹ ಆಯೋಜಿಸಲಾಗಿದೆ.
ಕುಪ್ಪಣ್ಣ ಪಾರ್ಕ್‌ನಲ್ಲಿ ವಿವಿಧ ತೋಟಗಾರಿಕಾ ಕ್ಷೇತ್ರ ನರ್ಸರಿಗಳ ಸಸ್ಯ, ತೆಂಗು, ಸಪೋಟ, ಪಪ್ಪಾಯಿ, ಅಡಿಕೆ, ಮಾವು, ನುಗ್ಗೆ, ಸೀಬೆ, ನೇರಳೆ, ನಿಂಬೆ, ಕರಿಬೇವು, ಹಿರಳಿ, ಹುಣಸೆ, ಸೀತಾಫಲ, ಚಕ್ರಮುನಿ, ವೀಳ್ಯದೆಲೆ, ಬೆಟ್ಟದ ನೆಲ್ಲಿ, ಬೆಣ್ಣೆಹಣ್ಣು, ಹಲಸು ಸಸ್ಯಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ. ಜತೆಗೆ ಮನರೇಗಾ, ತೋಟಗಾರಿಕೆ ಇಲಾಖೆಯಿಂದ ಸಿಗುವ ಪ್ರೋತ್ಸಾಹ ಧನದ ಬಗ್ಗೆ ಮಾಹಿತಿ ಫಲಕವನ್ನೂ ಹಾಕಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ.