ಮೈಸೂರು: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ವತಿಯಿಂದ ನಗರದ ಕುಪ್ಪಣ್ಣ ಉದ್ಯಾನದಲ್ಲಿ ಮೇ 26 ರಿಂದ 28ರವರೆಗೆ ಮಾವು ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕ ರುದ್ರೇಶ್ ತಿಳಿಸಿದರು.
ಮೇಳದಲ್ಲಿ 24 ಮಳಿಗೆಗಳನ್ನು ತೆರೆಯಲಾಗಿದ್ದು, ನೈಸರ್ಗಿಕವಾಗಿ ಮಾಗಿಸಿದ ವಿವಿಧ ತಳಿಯ ಮಾವಿನ ಹಣ್ಣುಗಳು ದೊರೆಯಲಿದೆ. ಮೈಸೂರು, ಮಂಡ್ಯ, ರಾಮನಗರ, ಕನಕಪುರ ಜಿಲ್ಲೆಯ ರೈತರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇ 26 ರಂದು ಬೆಳಗ್ಗೆ 11ಕ್ಕೆ ಮೇಳಕ್ಕೆ ಚಾಲನೆ ದೊರೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಬಾರಿ ಮಾವಿನ ಇಳುವರಿ ಶೇ.60 ರಷ್ಟು ಕಡಿಮೆಯಾಗಿದ್ದು, ಹೀಗಾಗಿ ಮಾವು ಬೆಳೆದ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಪ್ರತಿ ವರ್ಷ ಜ್ಯೂಸ್ ಕಂಪನಿಗಳು ರೈತರಿಂದ ಕೆ.ಜಿ.ಗೆ 20 ರಿಂದ 30 ರೂ.ನೀಡಿ ಮಾವು ಖರೀದಿದಿಸುತ್ತಿದ್ದವು. ಈ ಬಾರಿ 50 ರೂ. ಮಾವು ಖರೀದಿಸುತ್ತಿವೆ. ಅದೇ ರೀತಿ ಮಾರುಕಟ್ಟೆಯಲ್ಲೂ ಉತ್ತಮ ದರ ದೊರೆಯುತ್ತಿದೆ ಎಂದು ಹೇಳಿದರು.
ಮೇಳದಲ್ಲಿ ಪ್ರತಿ ರೈತರು 3 ರಿಂದ 4 ಟನ್‌ನಷ್ಟು ಮಾವು ಮಾರಾಟ ಮಾಡುವ ನಿರೀಕ್ಷೆಯನ್ನು ಹೊಂದಿದ್ದೇವೆ. ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಹಾಗೂ ಗ್ರಾಹಕರಿಗೆ ಉತ್ತಮವಾದ ಮಾವು ದೊರೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.