ಜಿಲ್ಲೆ

ಮಾವು, ಹಲಸು ಮೇಳಕ್ಕೆ ಚಾಲನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ನಗರದ ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಆವರಣದಲ್ಲಿ ಈ ತಿಂಗಳ ೨೮ ರ ವರೆಗೆ ಏರ್ಪಡಿಸಲಾಗಿರುವ ’ಮಾವು ಮತ್ತು ಹಲಸು ಮೇಳ’ಕ್ಕೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಶುಕ್ರವಾರ ಚಾಲನೆ ನೀಡಿದರು. ನಂತರ ಮಾತನಾಡಿ ಮಾವು ಮತ್ತು ಹಲಸು ಮೇಳದಿಂದ ರೈತರು ನೇರವಾಗಿ ತಾವು ಉತ್ಪಾದಿಸಿದ ಬೆಳೆಯನ್ನು ಮಾರಾಟ ಮಾಡಲು ಅನುಕೂಲವಾಗಿದೆ. ಜೊತೆಗೆ ಗ್ರಾಹಕರಿಗೂ ಸಹಕಾರಿಯಾಗಲಿದೆ. ಈ ಮೇಳದಿಂದ ರೈತರನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಸಹಕಾರಿಯಾಗಿದೆ. ಜಿಲ್ಲಾಡಳಿತ ಉತ್ತಮ ಕೆಲಸ ಕೈಗೊಂಡಿದೆ ಎಂದರು.

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶಮಾತನಾಡಿ ಮಾವು ಮತ್ತು ಹಲಸು ಮೇಳದಲ್ಲಿ ೨೫ ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ರಾಮನಗರ ಜಿಲ್ಲೆಯಿಂದ ಹೆಚ್ಚಿನ ಮಾವು ಬೆಳೆಗಾರರು ಆಗಮಿಸಿದ್ದಾರೆ. ರುಚಿಯಾದ ಮಾವು ಮತ್ತು ಹಲಸು ಹಣ್ಣನ್ನು ಗ್ರಾಹಕರು ಸವಿಯುವಂತಾಗಬೇಕು ಎಂದು ಹೇಳಿದರು.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಎಚ್.ಆರ್.ನಾಯಕ್, ಹಿರಿಯ ಸಹಾಯಕ ನಿರ್ದೇಶಕ ಸಿ.ಎಂ. ಪ್ರಮೋದ್ ವಿವಿಧ ರೀತಿಯ ಮಾವು ಮತ್ತು ಹಲಸು ಬಗ್ಗೆ ಮಾಹಿತಿ ನೀಡಿದರು.

ವಿಧಾನಪರಿ?ತ್ ಸದಸ್ಯ ಸುಜಾಕುಶಾಲಪ್ಪ, ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ, ನಿರ್ದೇಶಕರಾದ ನಾಗೇಶ್ ಕುಂದಲ್ಪಾಡಿ, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಲೀಲಾ ಮೇದಪ್ಪ, ಕೊನೇರಿರ ಎಂ.ಮನೋಹರ್, ಸುವಿನ್ ಗಣಪತಿ, ಮಹೇಶ್, ಕಾಂಗೀರ ಸತೀಶ್, ಇತರರು ಇದ್ದರು.