ಜಿಲ್ಲೆ

ಜಿಲ್ಲಾಡಳಿತಕ್ಕೆ ಮಾವು ನಷ್ಟದ ವರದಿ

ಗಂಗಾಧರ ಬಿ ವಿ

* ತೋಟಗಾರಿಕೆ ಇಲಾಖೆಯಿಂದ ಸಲ್ಲಿಕೆ ಕೇವಲ 10ರಷ್ಟು ಪ್ರಮಾಣದ ಇಳುವರಿ?

ರಾಮನಗರ

ಬಿಸಿಲ ಬೇಗೆಗೆ ಜಿಲ್ಲೆಯಲ್ಲಿ ಉಂಟಾಗಿರುವ ಮಾವಿನ ಬೆಳೆ ನಷ್ಟದ ಸಂಬಂಧ ವರದಿಯನ್ನು ತೋಟಗಾರಿಕೆ ಇಲಾಖೆ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ರೈತರಿಗೆ ಆಗಿರುವ ನಷ್ಟದ ಬಗ್ಗೆ ಉಲ್ಲೇಖಿಸಿದೆಯಾದರೂ, ನಷ್ಟದ ಪ್ರಮಾಣ ತಿಳಿಸಿಲ್ಲ.

ಜಿಲ್ಲೆಯ ಪ್ರಮುಖ ತೋಟಗಾರಿಕೆಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಮಾವು ಈ ಬಾರಿ ಬಿರುಬೇಸಿಗೆಯಿಂದ ನೆಲ ಕಚ್ಚಿದೆ. ಈ ಸಂಬಂಧ ರೈತರು, ಎಫ್‌ಪಿಒಗಳ ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ನಾಲ್ಕೂ ತಾಲೂಕುಗಳಲ್ಲಿ ಪರಿಶೀಲನೆ ನಡೆಸಿ ವರದಿಯನ್ನು ಏ.30ರಂದು ತೋಟಗಾರಿಕೆ ಇಲಾಖೆ ಜಿಲ್ಲಾಡಳಿತ ನೀಡಿದೆ.

ಈ ವರದಿಯಲ್ಲಿ ಮಾವಿನ ಪ್ರಮಾಣ ಶೇ.90ಕ್ಕೆ ಕುಸಿದು ಕೇವಲ 10ರಷ್ಟು ಪ್ರಮಾಣದ ಇಳುವರಿ ಬರಲಿದೆ ಎನ್ನುವ ವರದಿಯನ್ನು ನೀಡಲಾಗಿದೆ. ಅಲ್ಲದೆ, ಎನ್‌ಡಿಆರ್‌ಎಫ್ ಮಾರ್ಗ ಸೂಚಿಯಂತೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎನ್ನುವ ಮನವಿಯನ್ನು ಜಿಲ್ಲಾಡಳಿತಕ್ಕೆ ಮಾಡಿದೆ. ಆದರೆ, ಆಗಿರುವ ನಷ್ಟದ ಪ್ರಮಾಣದ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣವನ್ನು ಇಲಾಖೆ ನೀಡಿಲ್ಲ.

ವರದಿಯಲ್ಲಿ ಏನಿದೆ?:

ಜಿಲ್ಲೆಯಲ್ಲಿ ಮಾವು ಬೆಳೆ ಕುಸಿತದ ಜತೆಜತೆಗೆ, ಮಾವಿನ ಮರಗಳು ಸಾಯುತ್ತಿರುವ ಬಗ್ಗೆ ವಿಜಯವಾಣಿ ಏ.12 ರಂದು ವಿಸ್ತೃತ ವರದಿ ಮಾಡಿತ್ತು. ಏ.12ರಂದೇ ಜಿಲ್ಲಾಧಿಕಾರಿ ಪರಿಶೀಲನೆ ಮಾಡಲು ಸೂಚನೆ ನೀಡಿದ್ದರು. ಇದಾದ ನಂತರ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷಾ ತಂಡ ಜಿಲ್ಲೆಯ ಪಟ್ಟು 42 ತಾಲೂಕುಗಳಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಮಾವು ಬೆಳೆ ಸಂಪೂರ್ಣವಾಗಿ ನೆಲಕಚ್ಚಿ ಶೇ.10, 12 ಪ್ರಮಾಣ ಬೆಳೆ ಮಾತ್ರ ದೊರೆಯಲಿದೆ ಎಂದು ತಿಳಿಸಿದೆ.

ಪ್ರಮುಖವಾಗಿ ಶೇ.95 ಮಾವು ಬೆಳೆ ಮಳೆ ಆಶ್ರಿತವಾಗಿದ್ದು, ಮಳೆ ಕೊರತೆ ಹಾಗೂ ಬಿಸಿಲ ತಾಪಕ್ಕೆ ಹೂ ಕಚ್ಚುತ್ತಿಲ್ಲ, ಇರುವ ಕಾಯಿಗಳು ಉದುರುತ್ತಿವೆ ಹಾಗೂ ಕೆಲವು ಕಾಯಿಗಳು ಬಿಸಿಲ ಬೇಗೆಗೆ ಕಪ್ಪಾಗಿದ್ದು, ಮತ್ತೆ ಜೋನಿ ರೋಗಕ್ಕೆ ತುತ್ತಾಗಿವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಗುಣಮಟ್ಟ ಇಲ್ಲದ ಕಾರಣ ಇರುವ ಬೆಳೆಗೂ ಬೆಲೆ ಇಲ್ಲ ಎನ್ನುವುದನ್ನು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ತೇವಾಂಶದ ಕೊರತೆ ಕಾರಣ ಅಲ್ಲಲ್ಲಿ ಮಾವಿನ ಮರಗಳು ಸಾಯುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆಯಾದರೂ, ನಷ್ಟದ ಪ್ರಮಾಣ ಇಲ್ಲ.

ಬಾದಾಮಿಗೆ ಸ್ಪಾಂಜಿ ಟಿಸ್ಯೂ

ರಾಮನಗರ ಜಿಲ್ಲೆಯಲ್ಲಿ ಮಾವು ಬೆಳೆಯುವ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅತಿ ಹೆಚ್ಚು ಪ್ರದೇಶವನ್ನು ಬಾದಾಮಿ ತಳಿಯ ಮಾವು ಆವರಿಸಿದೆ. ಆದರೆ, ಈ ಬಾರಿ ಮಳೆ ಕೊರತೆ ಹಾಗೂ ಬಿಸಿಲ ತಾಪಕ್ಕೆ ಬಾದಾಮಿ ಸಂಪೂರ್ಣ ನೆಲ ಕಚ್ಚಿದೆ. ಬಿಸಿಲ ತಾಪ ಹೆಚ್ಚಾಗಿರುವ ಕಾರಣ ಸ್ಪಾಂಜಿ ಟಿಸ್ಯೂ ಎನ್ನುವ ಶಾರೀರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ಹಣ್ಣಿನ ಗುಣಮಟ್ಟ ಸಂಪೂರ್ಣವಾಗಿ ಕುಸಿದಿದೆ. ಬಾದಾಮಿ ತಳಿಯ ಮಾವನ್ನು ಹೆಚ್ಚಾಗಿ ಫಲ್ಪ್ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ. ಈ ಹಣ್ಣು ರಾಮನಗರ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹಾಗೂ ಕಂಪನಿಗಳಿಗೆ ಅತಿ ಹೆಚ್ಚು ರವಾನೆ ಆಗುತ್ತದೆ. ಈ ಬಾರಿ ಗುಣಮಟ್ಟದ ಹಣ್ಣಿನ ಕೊರತೆ ಹಾಗೂ ಇಳುವರಿ ಕೊರತೆಯಿಂದಾಗಿ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ.

ನಷ್ಟ ತುಂಬಿ ಕೊಡಬೇಕಿದೆ

ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 2.5 ಲಕ್ಷ ಮೆಟ್ರಿಕ್ ಟನ್ ಮಾವು ಇಳುವರಿ ಆಗುತ್ತದೆ. ಅಂದರೆ ಸುಮಾರು 400 ಕೋಟಿ ರೂ. ವಹಿವಾಟು ಪ್ರತಿ ವರ್ಷ ನಡೆಯುತ್ತದೆ ಎಂದು ಹೇಳಲಾಗಿದೆ. ಆದರೆ, ಈ ಬಾರಿ ಶೇ.90 ಬೆಳೆ ನಷ್ಟ ಉಂಟಾಗಿರುವ ಕಾರಣ 360 ಕೋಟಿ ರೂ. ನಷ್ಟ ರೈತರಿಗೆ ಆಗಿದೆ. ಇದರಲ್ಲಿ ಸುಮಾರು 150-180 ಕೋಟಿ ರೂ. ವರೆಗೂ ರೈತರ ಖರ್ಚು ಸೇರಿದ್ದು, ಸರ್ಕಾರ ಕೂಡಲೇ ರೈತರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವ ಕೆಲಸ ಮಾಡಬೇಕಿದೆ. ಜಿಲ್ಲಾಡಳಿತ ಮತ್ತೊಮ್ಮೆ ಸಮಗ್ರ ವರದಿ ಪಡೆದುಕೊಂಡು ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಬೇಕಿದೆ.

===

ತೋಟಗಾರಿಕೆ ಇಲಾಖೆ ಮಾವು ನಷ್ಟದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಿದೆ. ಆದರೆ, ಇದರಲ್ಲಿ ಒಟ್ಟಾರೆ ಎಷ್ಟು ನಷ್ಟವಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಜಿಲ್ಲಾಡಳಿತ ಸೂಕ್ತ ವರದಿ ಪಡೆದುಕೊಂಡು ರೈತರಿಗೆ ಆಗಿರುವ ನಷ್ಟಕ್ಕೆ ತಕ್ಕಂತೆ ಪರಿಹಾರ ಕೊಡಿಸಿಕೊಡಬೇಕು. ಸಿ.ಪುಟ್ಟಸ್ವಾಮಿ, ರೈತ ಮುಖಂಡರು, ರಾಮನಗರ