ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಸಹಯೋಗದಲ್ಲಿ
ಜೂ.29 ಮತ್ತು 30ರಂದು ಬೆಳಗ್ಗೆ 7ರಿಂದ ಸಾಯಂಕಾಲ 7ರವರೆಗೆ ನಗರದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ‘ಮಂಜು ಪ್ರಸಾದ’ದ ಆವರಣದಲ್ಲಿ ಮಾವು - ಹಲಸು ಮೇಳ ನಡೆಯಲಿದೆ.
ಮೇಳವನ್ನು ಕದ್ರಿ ಲಪುಷ್ಪ ಪ್ರದರ್ಶನದ ಗೌರವಾಧ್ಯಕ್ಷೆ ಆರೂರು ಲಕ್ಷ್ಮೀ ರಾವ್ ಉದ್ಘಾಟಿಸುವರು. ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ ದೀಪ ಪ್ರಜ್ವಲನೆ ಮಾಡುವರು. ಹಿರಿಯ ಕೃಷಿ ತಜ್ಞ ಶ್ರೀಪಡ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸುವರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಮಾರಾಟ ನಡೆಯಲಿದೆ. ಮೇಳದಲ್ಲಿ ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದ ತೂಬುಗೆರೆಯ ಕೃಷಿಕ ಹಲಸು ಹಾಗೂ ಹೂವಿನ ಬೆಳೆಗಾರ ಮುನಿರಾಜು, ಅರಸಿಕೆರೆಯ ಕೃಷಿಕ ಮಾವು ಮತ್ತು ಸಾವಯವ ದಿನಸಿ ಬೆಳೆಗಾರ ರಘು ಇವರುಗಳನ್ನು ಸನ್ಮಾನಿಸಲಾಗುವುದು.
ರಾಮನಗರ, ಮಂಡ್ಯ, ಮೈಸೂರು, ಬೆಳಗಾಂ ಹಾಗೂ ಸ್ಥಳೀಯ ಕೃಷಿಕರು ಭಾಗವಹಿಸುತ್ತಿದ್ದು, ರುದ್ರಾಕ್ಷ, ಚಂದ್ರಬರ್ಕೆ ಹಲಸು, ಮಲ್ಲಿಕಾ, ಮಲ್ಗೋವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಇತ್ಯಾದಿ ಮಾವಿನ ಹಣ್ಣುಗಳು ಲಭ್ಯವಿರುತ್ತದೆ. ಮಾವು ಹಲಸಿನಿಂದ ತಯಾರಿಸಿದ ಮೌಲ್ಯವರ್ಧಿತ ಖಾದ್ಯಗಳಾದ ಹಲಸಿನ ಕಬಾಬ್, ಹಲಸಿನ ಗಾರಿಗೆ, ಚಿಪ್ಸ್, ಉಂಡ್ಳಕ್ಕ, ಹಲಸಿನ ಪಾವುಬಾಜಿ, ಕಡುಬು, ಹಲಸಿನ ಕೇಕ್, ಹೋಳಿಗೆ, ಹಪ್ಪಳ, ಉಪ್ಪಿನಕಾಯಿ, ಐಸ್ ಕ್ರೀಂ, ವಿವಿಧ ಮಾವು ಹಲಸಿನ ಗಿಡಗಳು, ದೇಸಿ ತರಕಾರಿ ಬೀಜಗಳು, ಸಸಿಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಒಟ್ಟು 40 ಸ್ಟಾಲ್‌ಗಳಲ್ಲಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ ಕುಳಾಯಿ, ಪ್ರಮುಖರಾದ ಶಿವಪ್ರಸಾದ್ ಪ್ರಭು, ಜನಾರ್ದನ ಹಂದೆ, ಡಾ. ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.