ಜಿಲ್ಲೆ

ವೈಜ್ಞಾನಿಕ ಸುಧಾರಿತ ವಿಧಾನದಲ್ಲಿ ಹೆಚ್ಚಿನ ಟನ್ ಮಾವು ರಫ್ತು

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ವಿದೇಶಗಳ ಬೇಡಿಕೆಗೆ ಅನುಗುಣವಾಗಿ ಸ್ಥಳೀಯ ಮಾವಿನ ಹಣ್ಣಿನ ಗುಣಮಟ್ಟವನ್ನು ಕಾಪಾಡಿ, ಹೆಚ್ಚಿನ ಇಳುವರಿಯನ್ನು ಒಮ್ಮೆಲೆ ಸುಧಾರಿತ ಪ್ರಾಯೋಗಿಕ ವಿಧಾನದಲ್ಲಿ ರಫ್ತು ಮಾಡುವಲ್ಲಿ ಇಲ್ಲಿನ ಮಾವು ಕೊಯ್ಲೋತ್ತರ ನಿರ್ವಹಣಾ ಕೇಂದ್ರವು ಯಶಸ್ವಿಯಾಗಿದೆ.

ಏರ್ ಕಾರ್ಗೋ ದುಬಾರಿ. ಉತ್ಪನ್ನ ಸಾಗಣೆಗೂ ಕಡಿಮೆ ಮಿತಿ. ಅದರಲ್ಲೂ ನಿರೀಕ್ಷೆಯಂತೆ ಬೇಕಾದ ಸಮಯದಲ್ಲಿ ಸೇವೆ ಲಭಿಸುವುದಿಲ್ಲ. ಇದರ ನಡುವೆ ಸಂರಕ್ಷಣಾತ್ಮಕ ವಿಧಾನಗಳೊಂದಿಗೆ ಮಾವಿನ ಹಣ್ಣನ್ನು ಕಂಟೈನರ್‌ನಲ್ಲಿ ಚಿಂತಾಮಣಿಯಿಂದ ಚೆನ್ನೆಗೆ ಸಾಗಿಸಿ, ಅಲ್ಲಿಂದ ಹಡುಗಿನ ಮೂಲಕ ಯುರೋಪ್ ರಾಷ್ಟ್ರಗಳಿಗೆ ತಲುಪಿಸಲಾಗುತ್ತಿದೆ. ಅದರಂತೆ ಒಮ್ಮೆಲೆ 6.5 ಟನ್ ಉತ್ಪನ್ನ ಸಾಗಾಣೆಯಾಗಿದೆ. ರಾಜ್ಯದಲ್ಲಿ ಪ್ರಾಯೋಗಿಕ ವಿಧಾನದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣ ರಫ್ತಾಗಿದೆ. ಈ ಭಾಗದಿಂದ ಸಾಮಾನ್ಯವಾಗಿ ಏರ್ ಕಾರ್ಗೋ ಮೂಲಕ ಸರಾಸರಿ 1 ಟನ್ ಒಳಗೆ ಒಮ್ಮೆಲೆ ಮಾತ್ರ ಸಾಗಿಸಲಾಗುತ್ತಿತ್ತು. ಇದರಿಂದ ದುಬಾರಿ ನಿರ್ವಹಣೆ ವೆಚ್ಚ, ಅದರಲ್ಲೂ ಕಡಿಮೆ ಉತ್ಪನ್ನ ಸಾಗಾಣೆಯ ಅನಿವಾರ್ಯತೆ, ಪದೆ ಪದೇ ಪೂರೈಕೆ ಸಮಸ್ಯೆ ಕಂಡು ಬರುತ್ತಿತ್ತು.

*ಹೊಸ ಪ್ರಾಯೋಗಿಕ ಪ್ರಯತ್ನ

ವಿದೇಶಗಳಿಗೆ ಪೂರೈಸುವ ಸಂದರ್ಭದಲ್ಲಿ ಆಯಾ ರಾಷ್ಟ್ರಗಳು ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸದಿದ್ದಲ್ಲಿ ಉತ್ಪನ್ನಗಳನ್ನು ನಿರಾಕರಿಸಲಾಗುತ್ತದೆ. ಇದರಿಂದ ರಫ್ತು ವಹಿವಾಟಿನಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಇದಕ್ಕೆ ರೈತರು, ರಫ್ತುದಾರರು ಮತ್ತು ಖರೀದಿದಾರರ ನಡುವೆ ಸಂಪರ್ಕ ಕೊಂಡಿಯಾಗಿ ಮಾವು ಕೊಯ್ಲೋತ್ತರ ನಿರ್ವಹಣಾ ಕೇಂದ್ರವು ಕಾರ್ಯ ನಿರ್ವಹಿಸುವ ಮೂಲಕ ಉತ್ಪನ್ನದ ಬೇಡಿಕೆ ಹೆಚ್ಚಳಕ್ಕೆ ಅನುಗುಣವಾಗಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನೆರವಾಗುತ್ತಿದೆ.

ರೈತರಿಂದ ಖರೀದಿಯ ಹಣ್ಣನ್ನು ವಿದೇಶಗಳಿಗೆ ಸಾಗಿಸುವ ಮೊದಲು ಕೇಂದ್ರದಲ್ಲಿ ಗಾತ್ರ, ಬಣ್ಣ, ಸ್ಥಿತಿಯನ್ನಾಧಾರಿಸಿ ವಿಂಗಡಿಸಲಾಗುತ್ತದೆ. ಬಳಿಕ 42 ಡಿಗ್ರಿ ಸೆಲಿಯಷ್ಸ್ ಬಿಸಿ ನೀರಿನಲ್ಲಿ ತೊಳೆಯಲಾಗುತ್ತದೆ. ಬಯೋಲಾಜಿಕಲ್ ಸಂರಕ್ಷಣಾತ್ಮಕ ವಿಧಾನಗಳಲ್ಲಿ ಸಂಸ್ಕರಿಸಿ, ವಿದೇಶಿಗರನ್ನು ಆಕರ್ಷಿಸುವ ರೀತಿಯಲ್ಲಿ ವಿಶೇಷ ಪ್ಯಾಕಿಂಗ್ ಮೂಲಕ ಸಾಗಿಸಲಾಗುತ್ತದೆ. ಇನ್ನು ವಾಹನದಲ್ಲಿ ಕಂಟೈನರ್ 12 ಡಿಗ್ರಿ ಉಷ್ಠಾಂಶವನ್ನು ಕಾಯ್ದುಕೊಳ್ಳುವ ವ್ಯವಸ್ಥೆ ಇದ್ದು ಚೆನ್ನೆöÊನಲ್ಲಿ ಹಡುಗಿನ ಮೂಲಕ ನಿರ್ದಿಷ್ಟ ದಿನಗಳಲ್ಲಿ ಸಂಬಂಧಪಟ್ಟ ರಾಷ್ಟ್ರಗಳಿಗೆ ಕಳುಹಿಸಲಾಗುತ್ತದೆ.

ನೇರವಾಗಿ ಹಣ್ಣನ್ನು ತಲುಪಿಸುವುದರಿಂದ ಇಂತಿಷ್ಟು ದಿನಗಳಲ್ಲಿ ಮೆತ್ತಾಗುವ, ವಾಸನೆ ಬರುವ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗಬಹುದು. ಇನ್ನು ಹಣ್ಣಿನ ಮೇಲೆ ನಾನಾ ಬಗೆಯ ಹುಳುಗಳ ಸಣ್ಣ ಮೊಟ್ಟೆಗಳಿರಬಹುದು. ಇವು ಸಾಗಾಣೆಯ ಅವಧಿಯಲ್ಲಿ ಬೆಳವಣಿಗೆಯಾಗಿ ವಿದೇಶಗಳಲ್ಲಿ ಹುಳು ಕಾಟ ಕಾಡುವ ಸಾಧ್ಯತೆ ಇರುತ್ತದೆ. ಇದಕ್ಕೆ ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ಲೋಪಗಳು ಕಂಡು ಬಾರದು.

* ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ

ಭಾರತದ ಮಾವಿಗೆ ವಿದೇಶಗಳಲ್ಲಿ ಬೇಡಿಕೆ ಇದೆ. ಸಿಂಗಾಪುರ, ಅಮೇರಿಕಾ, ಆಸ್ಟ್ರೇಲಿಯಾ, ಜಪಾನ್, ಕೋರಿಯಾ ಸಾಗಾಣೆಯಾಗುತ್ತಿರುತ್ತದೆ. ಯೂರೋಪ್ ರಾಷ್ಟ್ರಗಳು ಬಾದಾಮಿ, ವೆನಿಷಾ ತಳಿಯನ್ನು ಹೆಚ್ಚಿಗೆ ಬಯಸುತ್ತಿವೆ. ಇತ್ತೀಚೆಗೆ ರಷ್ಯಾದಿಂದಲೂ ವಹಿವಾಟಿಗೆ ಒಲವು ವ್ಯಕ್ತವಾಗಿದೆ.

ರಾಜ್ಯದಲ್ಲಿ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಇದರಿಂದ ಸರಾಸರಿ ವಾರ್ಷಿಕ 12 ರಿಂದ 14 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಈ ಪೈಕಿ ಶೇ.30 ರಿಂದ 40 ರಷ್ಟು ಕರ್ನಾಟಕದಲ್ಲಿ ವಹಿವಾಟು, ಶೇ.29 ರಿಂದ 35 ರಷ್ಟು ಮಾವು ಹೊರ ರಾಜ್ಯಗಳಿಗೆ ಸಾಗಾಣೆಯಾಗುತ್ತಿದೆ. ಇದರ ನಡುವೆ ಗುಣಮಟ್ಟ ನಿರ್ವಹಣೆ, ವೈಜ್ಞಾನಿಕ ತಂತ್ರಗಳನ್ನು ಪಾಲಿಸುತ್ತಿರುವುದರಿಂದ ವಿದೇಶಗಳಿಂದಲೂ ಖರೀದಿಗೆ ಒಲವು ವ್ಯಕ್ತವಾಗುತ್ತಿದೆ.