ಜಿಲ್ಲೆ

ಜೂನ್ ಆರಂಭದಲ್ಲಿ ಮಾವು- ಹಲಸು ಮೇಳ: ಲಾಲ್‌ಬಾಗ್ ಸಸ್ಯತೋಟದಲ್ಲಿ ಆಯೋಜನೆ

ಪಂಕಜ ಕೆ.ಎಂ.

ಬೆಂಗಳೂರು: ಮಳೆ ಕೈಕೊಟ್ಟ ಕಾರಣ ಮಾವಿನ ಇಳುವರಿ ಕುಸಿದಿದ್ದು, ಗುಣಮಟ್ಟದ ಹಣ್ಣುಗಳ ಹುಡುಕಾಟದಲ್ಲಿರುವ ನಗರದ ಗ್ರಾಹಕರಿಗಾಗಿ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಜೂನ್ ಆರಂಭದಲ್ಲಿ ಲಾಲ್‌ಬಾಗ್‌ನಲ್ಲಿ ಮಾವು ಮತ್ತು ಹಲಸು ಮೇಳ ಆಯೋಜಿಸಲು ನಿರ್ಧರಿಸಿದೆ.

ಮೇಳದಲ್ಲಿ ಭಾಗವಹಿಸಲು ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿ ನಾನಾ ಜಿಲ್ಲೆಗಳ ರೈತರು ಸಜ್ಜಾಗುತ್ತಿದ್ದು, ಗುಣಮಟ್ಟದ ತಾಜಾ ಹಣ್ಣುಗಳನ್ನು ಬೆಳೆಗಾರರಿಂದ ಗ್ರಾಹಕರು ನೇರವಾಗಿ ಖರೀದಿಸಬಹುದು.

ಮೇಳದಲ್ಲಿ ಬಾದಾಮಿ, ರಸಪುರಿ, ಸೇಂಧೂರ, ಮಲಗೋವ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ, ಸಕ್ಕರೆಗುತ್ತಿ ಸೇರಿ ವಿವಿಧ ತಳಿಯ ಹಣ್ಣುಗಳು ಮಾರಾಟವಾಗಲಿವೆ. ವಾಣಿಜ್ಯ, ಪಾರಂಪರಿಕ ಮಾವಿನ ತಳಿಗಳು, ಜತೆಗೆ ಉಪ್ಪಿನಕಾಯಿಗೆ ಬಳಸುವ ಆಮ್ಲೆಟ್, ಮಿಡಿ ಮಾವು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ. ಐಐಎಚ್‌ಆರ್, ಜಿಕೆವಿಕೆ ಮತ್ತಿತರ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಹಲಸಿನ ತಳಿಗಳು, ರೈತರು ಬೆಳೆದು ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ.

ಮಳೆ ಇಲ್ಲದೆ ಇಳುವರಿ ಕುಸಿತ: ಈ ಬಾರಿ ಏರು ಹಂಗಾಮಾದರೂ ರಾಜ್ಯದಲ್ಲಿ ಸುಮಾರು 15 ಲಕ್ಷ ಟನ್ ಮಾವು ಉತ್ಪಾದನೆಯಾಗಬೇಕಿತ್ತು. ಆದರೆ ಸಕಾಲದಲ್ಲಿ ಮಳೆ ಇಲ್ಲದೆ ಹಾಗೂ ಅಧಿಕ ತಾಪಮಾನದಿಂದಾಗಿ ಮಾವಿನ ಇಳುವರಿ ತೀವ್ರ ಕುಸಿದಿದ್ದು, ಈ ಬಾರಿ ಕೇವಲ 4-5 ಲಕ್ಷ ಟನ್ ಮಾತ್ರ ಮಾವು ದೊರೆಯಲಿದೆ. ಸಹಜವಾಗಿಯೇ ಬೆಲೆಯಲ್ಲೂ ಏರಿಕೆಯಾಗಲಿವೆ ಎಂದು ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಸಹಜವಾಗಿ ಮಾಗಿಸಿದ ಹಣ್ಣುಗಳು: ಮೇಳದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ಸಹಜವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಯಾವುದೇ ರಾಸಾಯನಿಕ ಹಾಗೂ ಪೌಡರ್ ಬಳಸಿ ಹಣ್ಣಾಗಿಸಿದ್ದರೆ ಅಂತಹ ಹಣ್ಣುಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ ಎಂದು ಮಾರುಕಟ್ಟೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.