ಶ್ರೀನಿವಾಸಪುರ: ಕರೊನಾ ಸೋಂಕಿನ ಭೀತಿ ನಡುವೆಯೂ ಶ್ರೀನಿವಾಸಪುರ ಎಪಿಎಂಸಿ ಯಾರ್ಡ್‌ನಲ್ಲಿ ಕೆಲವರು ಮಂಡಿಗಳನ್ನು ಪ್ರಾರಂಭಿಸಿ ವಹಿವಾಟು ನಡೆಸುತ್ತಿದ್ದರೆ, ಇನ್ನು ಕೆಲವರು ಮಂಡಿಗಳಿಗೆ ಹೋಗುವುದೆ ಬೇಡವೆಂದು ತೋಟಗಳಲ್ಲಿಯೇ ವಹಿವಾಟು ನಡೆಸುತ್ತಿದ್ದಾರೆ. ಇನ್ನು ಹಲವರು ಆನ್‌ಲೈನ್ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ.
ರೈತರು ತೋಟಗಳಲ್ಲಿಯೇ ವಹಿವಾಟು ಪ್ರಾರಂಭಿಸಿ ತೋಟಗಳಲ್ಲಿಯೇ ಮಾವನ್ನು ಖರೀದಿಸಿ ಲೋಡ್ ಮಾಡಿ ಕಳಿಸುತ್ತಿದ್ದಾರೆ. ಎಪಿಎಂಸಿ ಯಾರ್ಡ್‌ನಲ್ಲಿ ವಹಿವಾಟು ಮಾಡಲು ಇಷ್ಟವಿಲ್ಲದಿರುವ ರೈತರು ನೇರವಾಗಿ ವ್ಯಾಪಾರಸ್ಥರನ್ನು ಭೇಟಿ ಮಾಡಿ ತೋಟಗಳಿಂದಲೇ ಮಾವು ಖರೀದಿಸುವಂತೆ ಮನವೊಲಿಸುತ್ತಿದ್ದಾರೆ. ಈಗ ಸೆಂದೂರ, ಬಾದಾಮಿ ಹಾಗೂ ತೋತಾಪುರಿ ಮಾತ್ರ ಮಾರುಕಟ್ಟೆಗೆ ಬರಲಾರಾಂಭಿಸಿದೆ.
ತೋತಾಪುರಿ ಟನ್ ಒಂದಕ್ಕೆ 18ರಿಂದ 20 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ. ಬಾದಾಮಿ 25ರಿಂದ 30 ಸಾವಿರ ರೂ,, ರಾಜಗಿರ 12-20 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ.
ಆನ್‌ಲೈನ್ ವ್ಯಾಪಾರ ಭರಾಟೆ: ಆನ್‌ಲೈನ್ ಮೂಲಕ 20ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡು ವಹಿವಾಟು ಪ್ರಾರಂಭಿಸಿದ್ದು, ಕಿಲೋ ಒಂದಕ್ಕೆ ಬಾದಾಮಿ 110 ರೂ, ಮಲ್ಲಿಕಾ 110-120 ರೂ, ಸಕ್ಕೆಗುತ್ತಿ 100 ರೂ, ರಸಪುರಿ 80ರೂ, ಸೆಂದೂರ 50-60 ರೂ,ಗೆ ಮಾರಾಟ ಮಾಡುತ್ತಿದ್ದಾರೆ. ತೋಟಗಳಲ್ಲಿರುವ ಪ್ಯಾಕಿಂಗ್ ಹೌಸ್‌ಗಳಲ್ಲಿ ಹಣ್ಣುಮಾಡಿ ಮೂರು ಕೆಜಿ ಮತ್ತು 5 ಕೆಜಿ ಬಾಕ್ಸ್‌ಗಳನ್ನು ಮಾಡಿ ವಹಿವಾಟು ನಡೆಸುತ್ತಿದ್ದಾರೆ.
ಆರ್‌ಕೆಎಸ್ ಮಂಡಿ ಮಾಲೀಕ ನಮ್ಮ ತೋಟದಲ್ಲಿಯೇ ಮಾವನ್ನು ಖರೀದಿಸಿದ್ದು, ಲಾರಿಗೆ ಲೋಡ್ ಮಾಡಿದ್ದೇವೆ. ಬಾದಾಮಿ ಟನ್ ಒಂದಕ್ಕೆ 30 ಸಾವಿರ ರೂ.ಗೆ ನೀಡಿದ್ದೇನೆ. ಇದೇ ರೀತಿ ಎಲ್ಲ ವ್ಯಾಪಾರಸ್ಥರು ತೋಟಗಳಲ್ಲಿಯೇ ಖರೀದಿಸಿದರೆ ಮಾರುಕಟ್ಟೆ ಆವರಣದಲ್ಲಿ ಜನಸಂದಣಿ ಕಡಿಮೆಯಾಗಿ ತಾಲೂಕನ್ನು ಕರೊನಾ ಮುಕ್ತವಾಗಿಸಬಹುದು. ಚಿನ್ನಪ್ಪರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಎಪಿಎಂಸಿ ಪ್ರಾಂಗಣದಲ್ಲಿ ವಹಿವಾಟು ಪ್ರಾರಂಭಿಸಲು ಮಂಡಿ ಮಾಲೀಕರಿಗೆ ತೊಂದರೆ ಇಲ್ಲ. ರಸ್ತೆ ಕಾಮಗಾರಿ ನಡೆಯುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಯಿತು. ಆದರೂ ಕಾಮಗಾರಿ ಬರದಿಂದ ಸಾಗಿದೆ. ವಿದ್ಯುತ್ ಶೌಚಗೃಹವನ್ನು ಮಂಡಿ ಮಾಲೀಕರೇ ಕಲ್ಪಿಸಿಕೊಳ್ಳಬೇಕು. ಉಳಿದ ಸೌಲಭ್ಯಗಳನ್ನು ಎಪಿಎಂಸಿಯಿಂದ ಮಾಡಲಾಗುವುದು. ರಾಜೇಂದ್ರ ಪ್ರಸಾದ್, ಎಪಿಎಂಸಿ ಅಧ್ಯಕ್ಷ