ಶ್ರೀನಿವಾಸಪುರ: ರೈತ, ಕೂಲಿಕಾರ್ಮಿಕ ವ್ಯಾಪಾರಸ್ಥರಿಂದ ಹಿಡಿದು ಸರಕು ಸಾಗಾಣಿಕೆ ಮಾಡುವವರು ವರ್ಷದ ಬೆಳೆಯಾದ ಮಾವನ್ನೇ ಅವಲಂಬಿಸಿದ್ದು, ಈ ವರ್ಷದ ಮಾವಿನ ವ್ಯಾಪಾರಕ್ಕೆ ಯಾವುದೇ ಅಡಚಣೆ ಆಗದಂತೆ ಮೂಲಸೌಲಭ್ಯ ಕಲ್ಪಿಸಿಕೊಡಬೇಕೆಂದು ಎಪಿಎಂಸಿ ಆಡಳಿತ ಮಂಡಳಿಗೆ ಹಾಗೂ ತಾಲೂಕು ಆಡಳಿತಕ್ಕೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ, ವರ್ತಕರ ಹಾಗೂ ರೈತರ ಸಭೆಯಲ್ಲಿ ಮಾತನಾಡಿ, ರೈತರು ಹೆಚ್ಚಾಗಿ ಈ ಸಭೆಯಲ್ಲಿ ಭಾಗವಹಿಸಬೇಕಾಗಿತ್ತು. ಮಾವಿನ ಸುಗ್ಗಿಯ ಒಳಗಾಗಿ ಮತ್ತೊಂದು ಸಭೆ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ರೈತರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ವಹಿವಾಟಿಗೆ ಅವಕಾಶ ಕಲ್ಪಿಸಿಕೊಡುವಂತೆ ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಹಾಗೂ ಕಾರ್ಯದರ್ಶಿ ವೇಣುಗೋಪಾಲ್‌ಗೆ ಸೂಚಿಸಿದರು.
ಮಂಡಿ ವರ್ತಕರಿಗೆ ಪರವಾನಗಿ ನೀಡಿಲ್ಲ. ವಹಿವಾಟು ನಡೆಸಲು ಸಮಸ್ಯೆಯಾಗುತ್ತದೆ ಎಂದು ವರ್ತಕರು ಶಾಸಕರ ಗಮನಕ್ಕೆ ತಂದಾಗ, ಇಂದಿನ ಕಾರ್ಯದರ್ಶಿ ವರ್ತಕರಿಂದ ಹಣ ಕಟ್ಟಿಸಿಕೊಂಡು ಹಣ ದುರುಪಯೋಗಪಡಿಸಿಕೊಂಡು ಪರವಾನಗಿ ನೀಡಿಲ್ಲ. ನಾನು ನೀಡಲು ಬರುವುದಿಲ್ಲ ಎಂದು ಕಾರ್ಯದರ್ಶಿ ತಿಳಿಸಿದಾಗ ಹಣ ದುರುಪಯೋಗಪಡಿಸಿಕೊಂಡವರ ವಿರುದ್ಧ ತನಿಖೆ ನಡೆಯುತ್ತದೆ. ವ್ಯಾಪಾರಕ್ಕೆ ತೊಂದರೆಯಾಗದಂತೆ ನೀವೇ ಪರವಾನಗಿ ನೀಡಬೇಕೆಂದು ಕಾರ್ಯದರ್ಶಿಗೆ ರಮೇಶ್‌ಕುಮಾರ್ ಸೂಚನೆ ನೀಡಿದರು.
ಖಾಸಗಿ ಜಾಗದಲ್ಲಿ ಮಾವು ವಹಿವಾಟು ಮಾಡುವವರಿಗೆ ಅವರಿಂದ ಶುಲ್ಕ ಪಡೆದು ಅವರಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಸೂಚಿಸಿದಲ್ಲದೆ, ಖಾಸಗಿ ಜಾಗದಲ್ಲಿ ವಹಿವಾಟು ಮಾಡಲು ವ್ಯಾಪಾರಸ್ಥರು ಮುಂದೆ ಬಂದರೆ ಅವರಿಂದ ಅರ್ಜಿ ಸ್ವೀಕರಿಸಿ ಪರವಾನಗಿ ನೀಡಿ. ಮಾವಿನ ಸುಗ್ಗಿಗೆ ಇತರ ರಾಜ್ಯಗಳಿಂದ ಆಗಮಿಸುವ ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ವಹಿವಾಟಿಗೆ ಅವಕಾಶ ಕಲ್ಪಿಸಿಕೊಡಿ ಎಂದು ತಹಸೀಲ್ದಾರ್ ಶ್ರೀನಿವಾಸ್ ಹಾಗೂ ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಕಾಶ್‌ಗೆ ಸೂಚಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಹಾಲಿ ಸದಸ್ಯ ಯೋಗೇಂದ್ರಗೌಡ, ಇಒ ಎಸ್.ಆನಂದ್, ಪುರಸಭೆ ಸಿಇಒ ಮೋಹನ್ ಕುಮಾರ್ ಹಾಗೂ ವರ್ತಕರು ಭಾಗವಹಿಸಿದ್ದರು.