ಜಿಲ್ಲೆ

ವಸತಿ ಶಾಲೆಯ ಎಂಟು ಮಕ್ಕಳಲ್ಲಿ ಮಂಗನಬಾವು

ಮುಂಡಗೋಡ: ಪಟ್ಟಣದ ಖಾಸಗಿ ಕಟ್ಟಡದಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆ ಪಾಳಾದಲ್ಲಿ ಎಂಟಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗನಬಾವು ಕಾಣಿಸಿಕೊಂಡಿರುವುದು ಇತರೆ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಂಗನಬಾವು ಸಾಂಕ್ರಾಮಿಕ ರೋಗವಾಗಿದ್ದು, ಈ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಮಂಗಳವಾರ ಅನಾರೋಗ್ಯದಿಂದ ಬಳಲುತ್ತಿದ್ದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾಲೂಕು ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು. ಅವರಲ್ಲಿ ಎಂಟು ವಿದ್ಯಾರ್ಥಿಗಳಿಗೆ ಮಂಗನಬಾವು ಕಾಣಿಸಿಕೊಂಡಿದ್ದು, ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ನೀಡಿ ಕಳುಹಿಸಿದ್ದಾರೆ.

ಈ ವಸತಿ ಶಾಲೆಯಲ್ಲಿ ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ 200 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮಂಗನಬಾವು ರೋಗ ಬಂದಿರುವ ಹಾಗೂ ರೋಗದ ಲಕ್ಷಣಗಳು ಕಾಣಿಸಿಕೊಂಡ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿ ಕೊಡುವುದು ಅವಶ್ಯವಿದೆ ಹಾಗೂ ವಸತಿ ಶಾಲೆಯಲ್ಲಿ ರೋಗ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.

ರೋಗ ಕಾಣಿಸಿಕೊಂಡ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗುವುದು. ಜತೆಗೆ ಶಾಲೆಯಲ್ಲಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. | ಉಮೇಶ ವೈ.ಕೆ. ಉಪನಿರ್ದೇಶಕರು, ಸಮಾಜ ಕಲ್ಯಾಣ ಕಾರವಾರ