ನಾಗಮಂಗಲ: ತಾಲೂಕಿನ ಅಗಚಹಳ್ಳಿ ಗೇಟ್ ಸಮೀಪ ಮಹಿಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಚಂದ್ರಮ್ಮ ಸರ ಕಳೆದುಕೊಂಡವರು. ಈಕೆ ಅಗಚಹಳ್ಳಿ ಗ್ರಾಮದ ತನ್ನ ಸಂಬಂಧಿಕರ ಮನೆಗೆ ಗೃಹಪ್ರವೇಶದ ಆಹ್ವಾನ ಪತ್ರಿಕೆ ಕೊಟ್ಟು ವಾಪಸ್ ಬರುತ್ತಿದ್ದಾಗ ಬಿ.ಜಿ ನಗರ ಕಡೆಯಿಂದ ಬೈಕಿನಲ್ಲಿ ಬಂದ 20 ರಿಂದ 25 ವಯಸ್ಸಿನ ಕಪ್ಪು ಬಣ್ಣದ ತುಂಬು ತೋಳಿನ ಅಂಗಿ ಧರಿಸಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಯು ಟರ್ನ್ ಮಾಡಿಕೊಂಡು ಬಂದಿದ್ದಾರೆ. ಈ ವೇಳೆ ಬೆಂಗಳೂರು ಕಡೆಗೆ ಹೋಗುವುದು ಹೇಗೆಂದು ವಿಳಾಸ ಕೇಳಿದ್ದಾರೆ. ಮಹಿಳೆ ರಸ್ತೆ ತೋರಿಸುತ್ತಿದ್ದ ವೇಳೆ ಬೈಕ್‌ನಲ್ಲಿ ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಆಕೆಯ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಅಂದಾಜು 2 ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.