ಜಿಲ್ಲೆ

ಬಸ್‌ನಲ್ಲೇ ಮಾಂಗಲ್ಯ ಅಪಹರಣ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ವರಮಹಾಲಕ್ಷ್ಮೀ ಹಬ್ಬದ ದಿನವೇ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳ್ಳರು ಮೂವರು ಮಹಿಳೆಯರ ಮಾಂಗಲ್ಯ ಸರ ದೋಚಿದ್ದಾರೆ. ವರಮಹಾಲಕ್ಷ್ಮೀ ಮತ್ತು ಪಟ್ಟಣದ ಸಂತೆ ದಿನವಾದ ಶುಕ್ರವಾರ ಬಸ್ ನಿಲ್ದಾಣ ಜನದಟ್ಟಣೆಯಿಂದ ಕೂಡಿತ್ತು. ಹೊಸರಿತ್ತಿ ಮಾರ್ಗದ ಬಸ್‌ನಲ್ಲಿ ನೂಕುನುಗ್ಗಲು ಉಂಟಾಗಿ, ಸಿದ್ದಾಪುರದ ನೇತ್ರಾವತಿ ಮಠದ, ರತ್ನವ್ವ ಕುರಿ ಹಾಗೂ ಶಿಗ್ಲಿಯ ಸೌಮ್ಯಾ ಮಾದನಹಳ್ಳಿ ಅವರ ಮಾಂಗಲ್ಯವನ್ನೇ ಅಪಹರಿಸಲಾಗಿದೆ. ಬಸ್ ಪೊಲೀಸ್ ಠಾಣೆ ಹತ್ತಿರ ಹಾದು ಹೋಗುವಾಗ ಒಬ್ಬ ಮಹಿಳೆಗೆ ವಿಷಯ ಗೊತ್ತಾಗಿ ಕಿರುಚಾಡಿದ್ದಾಳೆ. ಆಗ ಎಲ್ಲರೂ ತಮ್ಮ ಕೊರಳು ನೋಡಿಕೊಂಡಿದ್ದಾರೆ. ಚಾಲಕ ಬಸ್ ನಿಲ್ಲಿಸಿದಾಗ ಸರ ಕಳೆದುಕೊಂಡ ಮಹಿಳೆಯರು ಠಾಣೆಗೆ ದೂರು ನೀಡಿದ್ದಾರೆ. ಬಸ್‌ನಲ್ಲಿಯೇ ಮಾಂಗಲ್ಯದ ಗುಂಡುಗಳು ಸಿಕ್ಕಿವೆ. ವರಮಹಾಲಕ್ಷ್ಮೀ ಪೂಜೆ ಹಿನ್ನೆಲೆಯಲ್ಲಿ ಪೊಲೀಸರು ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆಯ ಸಂದೇಶ ತಲುಪಿಸಿದ್ದರು. ಆದರೂ ಕಳ್ಳತನದ ಕೇಸ್‌ಗಳು ನಿಂತಿಲ್ಲ. ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಪೊಲೀಸರು ನಿಗಾ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.