ಮೈಸೂರು: ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಗುರುವಾರ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾ ಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಎಡಿಆರ್‌ಎಂ ಶಮ್ಮಾಸ್ ಹಮೀದ್ ವ್ಯವಸ್ಥೆಗಳನ್ನು ಪರಿಶೀಲಿಸಿ, ಸುಗಮ ವರ್ಗಾವಣೆ ಹಾಗೂ ರೈಲು ಕಾರ್ಯಾಚರಣೆಗಳು ಯಾವುದೇ ಅಡಚಣೆಯಿಲ್ಲದೆ ಮುಂದುವರಿಯಲು ಅಗತ್ಯ ಕ್ರಮಗಳನ್ನು ಕೈಗೊಂಡರು.
ಮೈಸೂರು ವಿಭಾಗದ ಇತರ ಶಾಖಾಧಿಕಾರಿಗಳೊಂದಿಗೆ ಶಮ್ಮಾಸ್ ಹಮೀದ್ ಅವರು ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಮತ್ತು ಜೋಕಟ್ಟೆ ಸೇರಿದಂತೆ ಮಂಗಳೂರು ಪ್ರದೇಶದ ಪ್ರಮುಖ ರೈಲು ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯಾಚರಣಾ ವ್ಯವಸ್ಥೆಗಳು ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿದರು. ಅಧಿಕಾರಿಗಳು ಹಾಗೂ ರೈಲ್ವೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ರೈಲು ಕಾರ್ಯಾಚರಣೆಗಳು ಸುಗಮವಾಗಿ ನಡೆಯಲು ಅಗತ್ಯವಿರುವ ಸಿಬ್ಬಂದಿ, ಸಂಪನ್ಮೂಲಗಳು ಹಾಗೂ ಇತರ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಈ ಭೇಟಿಯ ಸಂದರ್ಭದಲ್ಲಿ ವಿವಿಧ ವಿಭಾಗಗಳ ನಡುವಿನ ಪರಿಣಾಮಕಾರಿ ಸಮನ್ವಯ, ಸಿಬ್ಬಂದಿಯ ಸಿದ್ಧತೆ, ರೈಲುಗಳ ಕಾರ್ಯಾಚರಣೆ, ಸುರಕ್ಷತಾ ವ್ಯವಸ್ಥೆಗಳು, ನಿರ್ವಹಣಾ ಚಟುವಟಿಕೆಗಳು ಹಾಗೂ ಪ್ರಯಾಣಿಕರಿಗೆ ಸಂಬಂಧಿಸಿದ ಸೇವೆಗಳಿಗೆ ವಿಶೇಷ ಒತ್ತು ನೀಡಲಾಯಿತು. ಕಾರ್ಯಾಚರಣೆಗೆ ಸಂಬಂಧಿಸಿದ ಅಗತ್ಯತೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಹಾಗೂ ಕ್ಷೇತ್ರ ಮಟ್ಟದ ಘಟಕಗಳು ಮತ್ತು ವಿಭಾಗೀಯ ಕಚೇರಿಯ ನಡುವೆ ನಿರಂತರ ಸಮನ್ವಯವನ್ನು ಕಾಯ್ದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಮಂಗಳೂರು ರೈಲು ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದು ಆಡಳಿತಾತ್ಮಕ ಹಾಗೂ ಕಾರ್ಯಾಚರಣೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಹೊಸ ವ್ಯಾಪ್ತಿಯಡಿ ರೈಲುಗಳ ಸಂಚಾರ, ನಿರ್ವಹಣಾ ಚಟುವಟಿಕೆಗಳು, ಸುರಕ್ಷತಾ ಕ್ರಮಗಳು ಹಾಗೂ ಇತರ ರೈಲ್ವೆ ಸೇವೆಗಳು ಯಾವುದೇ ವ್ಯತ್ಯಯವಿಲ್ಲದೆ ಸುಗಮವಾಗಿ ಮುಂದುವರಿಯುವಂತೆ ಮೈಸೂರು ವಿಭಾಗವು ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.