ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. 
ಜಿಲ್ಲೆ

ಮಂಗಳೂರು ಪೊಲೀಸರಿಂದ 5.20 ಕೋಟಿ ರೂ. ಮೌಲ್ಯದ ಡ್ರಗ್ಸ್ ಬೇಟೆ

ಮಂಗಳೂರು ಪೊಲೀಸರಿಂದ 5.20 ಕೋಟಿ ರೂ. ಮೌಲ್ಯದ ಡ್ರಗ್ಸ್ ಬೇಟೆ
ಮಂಗಳೂರು: ಬೆಂಗಳೂರು ನಗರವನ್ನು ಕೇಂದ್ರವಾಗಿರಿಸಿ ಕೇರಳ ರಾಜ್ಯ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ 5.20 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ 5.196 ಕಿ.ಗ್ರಾಂ. ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಬೃಹತ್ ಜಾಲ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಾಗಲಕೋಟೆಯಲ್ಲಿ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿಯ ಮುಹಮ್ಮದ್ ಅಲ್ಫಾಜ್ (28) ಹಾಗೂ ಉಜಿರೆಯ ಹಳೇ ಪೇಟೆ ಲಾಯಿಲಾ ವಿವೇಕನಂದ ನಗರದ ಮುಹಮ್ಮದ್ ಮುಸ್ತಫಾ (28) ಬಂಧಿತರು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡ್ರಗ್ಸ್ ಮುಕ್ತ ಮಂಗಳೂರು ಮಾಡುವ ನಿಟ್ಟಿನಲ್ಲಿ ಪೊಲೀಸರ ನಿರಂತರ ಕಾರ್ಯಾಚರಣೆ ಮುಂದುವರಿದ್ದು, ಇದರ ಭಾಗವಾಗಿ 15 ದಿನಗಳ ಹಿಂದೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿಗುಡ್ಡೆ ವಾಟರ್‌ಟ್ಯಾಂಕ್ ಬಳಿಯ ಮನೆಯೊಂದರಲ್ಲಿ ದಾಸ್ತಾನು ಇಟ್ಟು ಮಾರಾಟ ಮಾಡುತ್ತಿದ್ದ ಅಣ್ಣಪ್ಪಸ್ವಾಮಿ ಎಂಬಾತನನ್ನು ಬಂಧಿಸಿ ಆತನಿಂದ 1.50 ಲಕ್ಷ ರೂ. ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿತ್ತು. ಆತನಿಗೆ ಪೂರೈಕೆ ಮಾಡುತ್ತಿದ್ದ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನವದೆಹಲಿಯಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿಕೊಂಡು ಬೆಂಗಳೂರಿಗೆ ಸಾಗಾಟ ಮಾಡುತ್ತಿರುವಾಗ ಬೆಳ್ತಂಗಡಿ ಮೂಲದ ಈ ಇಬ್ಬರು ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಎಂಬಲ್ಲಿಗೆ ದಾಳಿ ನಡೆಸಿ ಬಂಧಿಸಲಾಗಿದೆ. ಬಂಧಿತರಿಂತ ಎಂಡಿಎಂಎ ಜತೆ ಬ್ಯಾಗ್ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮುಹಮ್ಮದ್ ಅಲ್ಫಾಜ್ ಎಂಬಾತನ ವಿರುದ್ದ ಈ ಹಿಂದೆ 2024 ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಾಗೂ 2026 ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಎಂಡಿಎಂಎ ಮಾರಾಟ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಈ ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಈ ನಿಟ್ಟಿನಲ್ಲಿ ಪತ್ತೆ ಕಾರ್ಯ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಡಿಸಿಪಿಗಳಾದ ರವಿಶಂಕರ್ ಹಾಗೂ ಮಿಥುನ್ ಉಪಸ್ಥಿತರಿದ್ದರು.