ಮಂಗಳೂರು : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಮೂವರಿಗೆ 20 ವರ್ಷಗಳ ಕಠಿನ ಶಿಕ್ಷೆ ಮತ್ತು 1,65,000 ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎ್.ಟಿ.ಎಸ್.ಸಿ-2 ಪೊಕ್ಸೋ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಮಂಗಳೂರು ತಾಲೂಕು ಮೂಳೂರು ಗ್ರಾಮ ಕಿನ್ನಿಕಂಬ್ಳ ಮಸೀದಿ ಹತ್ತಿರದ ನಿವಾಸಿ ಮೊಹಮ್ಮದ್ ಶಾಕೀರ್ ಅಲಿಯಾಸ್ ಸಾಕೀರ್ ಅಲಿಯಾಸ್ ಶಾಕೀರ್ (26), ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಬಂಗ್ಲೆ ಗುಡ್ಡೆ ನಿವಾಸಿ ಅಬ್ದುಲ್ ಸಮದ್ ಅಲಿಯಾಸ್ ಸಮದ್ (32), ಬಂಟ್ವಾಳ ತಾಲೂಕು ಕೈಕಂಬ ನಿವಾಸಿ ಅಭಿಜಿತ್ ಅಲಿಯಾಸ್ ಅಭಿ (27) ಶಿಕ್ಷೆಗೊಳಗಾದವರು.
* ಪ್ರಕರಣದ ಹಿನ್ನೆಲೆ: 2021ರ ಡಿ.7ರಂದು ತೊಕ್ಕೊಟ್ಟು ಬಸ್ಸು ತಂಗುದಾಣದ ಬಳಿಯಿಂದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಮೊಬೈಲ್ ಮತ್ತು ಹೊಸ ಬಟ್ಟೆಗಳನ್ನು ತೆಗೆದುಕೊಡುವುದಾಗಿ ಆಮಿಷ ತೋರಿಸಿ ಶಾಕೀರ್ ಹಾಗೂ ಸಮದ್ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕೆ.ಜೆ.ಎಂ. ರೋಡ್ ಜಂಕ್ಷನ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಸಮದ್ ತನ್ನ ಸ್ಕೂಟರ್‌ನಲ್ಲಿ ಬಾಲಕಿಯನ್ನು ಕೂರಿಸಿಕೊಂಡು ಅಲ್ಲಿನ ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಮ್‌ನಲ್ಲಿ ಕೂಡಿ ಹಾಕಿದ್ದಾನೆ. ಡಿ.11ರ ಸಂಜೆ ವರೆಗೆ ಇಬ್ಬರೂ ಆಕೆಗೆ ಬೇಡ ಎಂದರೂ ಬಿಯರ್ ಕುಡಿಸಿ, ಸಿಗರೇಟ್‌ನಲ್ಲಿ ಗಾಂಜಾವನ್ನು ಬೆರೆಸಿ ಒತ್ತಾಯದಲ್ಲಿ ಸೇದಿಸಿದ್ದಾರೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ರಾತ್ರಿ 7.15ಕ್ಕೆ ಆಕೆಯನ್ನು ನಾಟೆಕಲ್‌ಗೆ ಕರೆ ತಂದು ಸ್ನೇಹಿತ ಆಭಿಜಿತ್ ಎಂಬಾತನ ಜತೆ ಕಳುಹಿಸಿದ್ದಾರೆ. ಆತ ತನ್ನ ಕಾರಿನಲ್ಲಿ ಅದೇ ದಿನ ರಾತ್ರಿ 12ಗಂಟೆಗೆ ಮಂಗಳೂರು ತಾಲೂಕು ಪಜೀರ್ ಗ್ರಾಮದ ಕಂಬಳಪದವು ಎಂಬಲ್ಲಿರುವ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಬಿಯರ್ ಕುಡಿಸಿ, ಗಾಂಜಾ ಸೇದಿಸಿ ಅತ್ಯಾಚಾರ ಮಾಡಿದ್ದಾನೆ. ಅನಂತರ ಶಾಕೀರ್ ಹಾಗೂ ಸಮದ್ ಕೂಡಾ ಅಲ್ಲಿಗೆ ಬಂದಿದ್ದು, ಮತ್ತೊಮ್ಮೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಳ್ಳಾಲ ಪೊಲೀಸ್ ನಿರೀಕ್ಷಕರಾಗಿದ್ದ ಸಂದೀಪ್ ಜಿ.ಎಸ್. ಅವರು ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎ್.ಟಿ.ಎಸ್.ಸಿ-2 ಪೊಕ್ಕೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 15 ಸಾಕ್ಷಿದಾರರ ವಿಚಾರಣೆ ಮತ್ತು 50 ದಾಖಲೆಗಳನ್ನು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ನೊಂದ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದರು. ಬಾಲಕಿ ಮತ್ತು ಯುವಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಕಂಡು ಬಂದಿದೆ. ಅತ್ಯಾಚಾರ ಮಾಡಿದ ಸ್ಥಳದಿಂದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು, ಅದು ಗಾಂಜಾ ಎನ್ನುವ ಬಗ್ಗೆ ಎ್.ಎಸ್.ಎಲ್ ಅಧಿಕಾರಿಗಳು ವರದಿ ನೀಡಿದ್ದರು.
ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ಪ್ರತಿವಾದವನ್ನು ಆಲಿಸಿ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಜ.31ರಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎ್.ಟಿ.ಎಸ್.ಸಿ-2 ಪೊಕ್ಸೋ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಮಾನು ಕೆ.ಎಸ್.ಅವರು ತೀರ್ಪು ನೀಡಿದ್ದಾರೆ. ಐಪಿಸಿ ಕಲಂ: 376(ಡಿ) ಮತ್ತು ಕಲಂ: 6 ಪೊಕ್ಸೋ ಕಾಯ್ದೆಯಂತೆ 20 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 40,000 ರೂ. ದಂಡ ವಿಧಿಸಿದ್ದಾರೆ. ಐಪಿಸಿ ಕಲಂ: 363 ರ ಪ್ರಕಾರ 3 ವರ್ಷ ಸಾದಾ ಶಿಕ್ಷೆ ಮತ್ತು ತಲಾ 5,000 ರೂ.ದಂಡ, ಐಪಿಸಿ ಕಲಂ: 343ರ ಪ್ರಕಾರ 1ವರ್ಷ ಸಾದಾ ಶಿಕ್ಷೆ ಮತ್ತು ತಲಾ 2,000 ರೂ.ದಂಡ, ಐಪಿಸಿ ಕಲಂ: 328ರ ಪ್ರಕಾರ 3 ವರ್ಷ ಸಾದಾ ಶಿಕ್ಷೆ ಮತ್ತು ತಲಾ 5,000 ರೂ. ದಂಡ, ಐಪಿಸಿ ಕಲಂ: 506ರ ಪ್ರಕಾರ 1 ವರ್ಷ ಸಾದಾ ಶಿಕ್ಷೆ ಮತ್ತು ತಲಾ 2,000 ರೂ.ದಂಡ ವಿಧಿಸಲಾಗಿದೆ. ಎನ್.ಡಿ.ಪಿ.ಎಸ್. ಕಾಯ್ದೆ ಕಲಂ: 27(ಬಿ) ಪ್ರಕಾರ 3 ತಿಂಗಳ ಸಾದಾ ಶಿಕ್ಷೆ ಮತ್ತು ತಲಾ 500 ರೂ.ದಂಡ, ಎನ್.ಡಿ.ಪಿ.ಎಸ್ ಕಾಯ್ದೆ ಕಲಂ: 20(ಬಿ)(2)ಎ ಪ್ರಕಾರ 6 ತಿಂಗಳ ಸಾದಾ ಶಿಕ್ಷೆ ಮತ್ತು 500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿ ಅವರು ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡನೆ ಮಾಡಿದ್ದಾರೆ.
ದಂಡದ ಒಟ್ಟು ಹಣವಾದ 1,65,000 ರೂ. ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ 2,35,000 ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ತೀರ್ಪಿನಲ್ಲಿ ನಿರ್ದೇಶನ ನೀಡಿದೆ.