ಮಂಗಳೂರು: ದುಂಬಿಗಳ ಝೆಂಕಾರ, ಘಮ ಘಮಿಸುವ ಪರಿಮಳ, ಕಣ್ಮನ ಸೆಳೆಯುವ ಬಣ್ಣ ಬಣ್ಣದ ಆಕರ್ಷಕ ಪುಷ್ಪಗಳು, ಚಪ್ಪರ ತುಂಬಾ ನಳನಳಿಸುವ ತರಕಾರಿ. ಫಲಪುಷ್ಪ ಪ್ರದರ್ಶನಕ್ಕೆ ಕದ್ರಿ ಉದ್ಯಾನವನ ಮದುವಣಗಿತ್ತಿಯಂತೆ ಶೃಂಗಾರಗೊಂಡು ಶೋಭಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾ ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಸಿರಿ ತೋಟಗಾರಿಕೆ ಸಂಘ ಮಂಗಳೂರು ಮತ್ತು ಇತರ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಜ.23ರಿಂದ 26ರವರೆಗೆ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.
* ವಿಶೇಷ ಆಕರ್ಷಣೆ: ಈ ಬಾರಿಯ ಪ್ರದರ್ಶನದಲ್ಲಿ ಹೂವುಗಳಿಂದ ತಯಾರಿಸಲಾದ 22 ಅಡಿ ಎತ್ತರದ ಐಫೆಲ್ ಟವರ್ ವಿಶೇಷ ಆಕರ್ಷಣೆಯಾಗಿರಲಿದೆ. 12 ಅಡಿ ಸುತ್ತಳತೆಯಲ್ಲಿ ಅಂದಾಜು 2 ಲಕ್ಷ ವಿವಿಧ ಹೂವುಗಳಿಂದ ಈ ಟವರ್ ಸಿಂಗಾರಗೊಳ್ಳಲಿದೆ. ಫಲಪುಷ್ಪಪ್ರದರ್ಶನದ ಅಂಗವಾಗಿ ಈಗಾಗಲೇ ಮಂಗಳೂರು ಕದ್ರಿ ಉದ್ಯಾನವನದಲ್ಲಿ ಸುಮಾರು 20,000 ಸಂಖ್ಯೆಯ 30ಕ್ಕೂ ಹೆಚ್ಚು ವಿವಿಧ ಜಾತಿಯ ಹೂವುಗಳನ್ನು ಹಾಗೂ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಜೋಡಿಸಲಾಗಿದೆ.
ತೋಟಗಾರಿಕಾ ಇಲಾಖೆ ವತಿಯಿಂದ ವಿವಿಧ ಜಾತಿಯ ಒಂದೂವರೆ ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಒಂದು ಗಿಡಕ್ಕೆ ಒಂದು ರೂ.ನಂತೆ ಮಾರಾಟ ಮಾಡಲಾಗುವುದು. ಟೊಮೊಟೊ, ಬದನೆ, ಬೆಂಡೆ, ಅಲಸಂಡೆ ಗಿಡಗಳು ಮಾರಾಟಕ್ಕೆ ಲಭ್ಯವಿವೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಡಿ. ತಿಳಿಸಿದ್ದಾರೆ.