ಮಂಗಳೂರು: ದೇಶದ ಜನತೆಗೆ ಅಚ್ಚೇದಿನ್ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಹೆಣದ ಪೆಟ್ಟಿಗೆ ಹಾಗೂ ಕಟ್ಟಿಗೆಗೆ ಜಿಎಸ್‌ಟಿ ಹಾಕಿದರೂ ಅಚ್ಚರಿಯಿಲ್ಲ. ಒಂದೆರಡು ವರ್ಷಗಳಲ್ಲಿ ಶ್ರೀಲಂಕಾದ ಆರ್ಥಿಕ ದುಸ್ಥಿತಿ ದೇಶಕ್ಕೂ ಕಾಡಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಕುಂಞಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಬ್ಬಿಣ, ಸಿಮೆಂಟ್‌ಗೆ ಜಿಎಸ್‌ಟಿ ಹಾಕುವಾಗ ಯಾರೂ ಮಾತನಾಡಲಿಲ್ಲ. ಈಗ ದಿನನಿತ್ಯ ಉಪಯೋಗಿಸುವ ಮೊಸರು, ಮಜ್ಜಿಗೆಯಂತಹ ವಸ್ತುಗಳ ಮೇಲೂ ಜಿಎಸ್‌ಟಿ ಹಾಕಿರುವುದು ಆಘಾತಕಾರಿ. ಇದರ ವಿರುದ್ಧ ಶೀಘ್ರದಲ್ಲೇ ಜೆಡಿಎಸ್ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿಯ ಯಾವುದೇ ಶಾಸಕರು ಜನಪರ ಯೋಜನೆ ರೂಪಿಸಿಲ್ಲ. ಹಾಗಾಗಿ ಈ ಬಾರಿ ಮೋದಿ ಹೆಸರಿನಲ್ಲಿ ಮತ ಕೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತ ಜನ ಬಿಜೆಪಿಗೆ ಅಧಿಕಾರ ನೀಡಿ ಬದಲಾವಣೆ ಬಯಸಿದ್ದರು. ಆದರೆ ಬಿಜೆಪಿಯ ಜಿಲ್ಲೆಯ ಶಾಸಕರು ಕೇವಲ ಕಾಮಗಾರಿಗಳ ಬಗ್ಗೆ ಮಾಧ್ಯಮದಲ್ಲಿ ಪ್ರಚಾರ ಮಾತ್ರವೇ ನೀಡಿದ್ದು, ಬಿಟ್ಟರೆ ಜನಪರ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಹಲವು ಕಾರಣಗಳಿಂದ ಜೆಡಿಎಸ್ ದುರ್ಬಲವಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಿ ಸಮಾವೇಶ ನಡೆಸುವ ಮೂಲಕ ಪಕ್ಷವನ್ನು ಮರು ಸಂಘಟಿಸುವ ಕೆಲಸ ಮಾಡಲಾಗುವುದು ಎಂದರು.
ಮುಖಂಡರಾದ ಮುನೀರ್ ಮುಕ್ಕಚ್ಚೇರಿ, ಪ್ರವೀಣ್ ಚಂದ್ರ ಜೈನ್, ರಮೀಝಾ ನಾಸಿರ್ ಉಪಸ್ಥಿತರಿದ್ದರು.