ಮಂಗಳೂರು: ವಿಮಾನ ನಿಲ್ದಾಣದ ಸಿಐಎಸ್‌ಎಫ್‌ನ ಸೆಕ್ಯುರಿಟಿ ಗ್ರೂಪ್‌ನ ಕೆ9 ಸ್ಕ್ವಾಡ್ ಸದಸ್ಯೆ ಹಾಗೂ ಲ್ಯಾಬ್ರಡಾರ್ ನಾಯಿ ಜೂಲಿಗೆ ಮಂಗಳೂರು ಅಂ.ರಾ.ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಜೂಲಿ ಬದಲಿಗೆ 11 ತಿಂಗಳ ಲ್ಯಾಬ್ರಡಾರ್ ನಾಯಿಮರಿ ರಿಯೋವನ್ನು ಕೆ9 ತಂಡಕ್ಕೆ ಸ್ವಾಗತಿಸಲಾಯಿತು.
ರಿಯೋ ಈಗ ವಿಮಾನ ನಿಲ್ದಾಣದಲ್ಲಿ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸುವ 4 ಸದಸ್ಯರ ಕೆ9 ಸ್ಕ್ವಾಡ್‌ನ ಭಾಗವಾಗಿದೆ. ರಿಯೋ ರಾಂಚಿಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಶ್ವಾನ ತರಬೇತಿಯಲ್ಲಿ ಕಠಿಣ ತರಬೇತಿ ಪಡೆದಿದೆ. ರಿಯೋ ಶ್ರೇಷ್ಠ ಕರ್ತವ್ಯದ ಜತೆ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಸುರಕ್ಷತೆ ಮತ್ತು ಭದ್ರತಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ಏರೋಡ್ರೋಮ್ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ ತಿಳಿಸಿದರು.
8 ವಷಧ ಹಿಂದೆ ಕೆ9 ಸ್ಕ್ವಾಡ್‌ಗೆ ಸೇರಿದ ಜೂಲಿ ವಿಮಾನ ನಿಲ್ದಾಣದಲ್ಲಿ ಹಲವಾರು ಭದ್ರತಾ ಕಾರ್ಯಾಚರಣೆ ಹಾಗೂ ವ್ಯಾಯಾಮಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪತ್ತೆ ಮತ್ತು ಗಸ್ತು ಕರ್ತವ್ಯಗಳಲ್ಲಿ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಿದ್ದು, ಸದ್ಯ ನಿವೃತ್ತ ಜೀವನಕ್ಕೆ ಕಾಲಿಟ್ಟಿದೆ.