ಮಂಗಳೂರು: ಹಣದ ಬೇಡಿಕೆ ಇಟ್ಟು ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಆರೋಪಿ ರೋಷನ್ ಕಿಣಿ ಎಂಬಾತನಿಗೆ ನಗರದ 6ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ರೋಷನ್ ಕಿಣಿ ಮತ್ತು ಇತರರ ವಿರುದ್ದ ಮೇ 25ರಂದು ಬರ್ಕೆ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಬಿಜೈ ಕಾಪಿಕಾಡ್ ನ ಪ್ರೀತೇಶ್ ಎನ್. ಕುಮಾರ್ ಎಂಬವರ ಸ್ಕೂಟರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಹಣವನ್ನು ತರುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ರೋಷನ್ ಕಿಣಿ 6ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ.
ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಿದ ಸಹಾಯಕ ಸರ್ಕಾರಿ ಅಭಿಯೋಜಕಿ ಅಶ್ವಿತಾ ಅಮೀನ್ ಅವರು, ಆರೋಪಿ ರೋಷಣೆ ಕಿಣಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ಹಾಗೂ ಆತನ ಮೇಲಿನ ಈ ಹಿಂದಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಶಶಿಕಲಾ ಜಿ. ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿ, ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ.