ಜಿಲ್ಲೆ

ಮಂಗಳೂರು ಅಕ್ರಮ ಪಿಸ್ತೂಲ್ ಹೊಂದಿದ್ದ ಇಬ್ಬರ ಬಂಧನ

ಹರೀಶ ಎಂ.

ಮಂಗಳೂರು: ಅಕ್ರಮವಾಗಿ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪಂಪ್‌ವೆಲ್‌ನ ತೌಸಿಫ್ ಅಹಮ್ಮದ್(38) ಮತ್ತು ಕೆ.ಸಿ.ರೋಡ್‌ನ ಅಬ್ದುಲ್ ಖಾದರ್(41) ಬಂಧಿತ ಆರೋಪಿಗಳು.

ಪಿಎಸ್‌ಐ ಶಿವಕುಮಾರ್ ಅವರು ಸಿಬಂದಿಯ ಜತೆ ಸೋಮವಾರ ಅಪರಾಹ್ನ ರೌಂಡ್ಸ್ ಕರ್ತವ್ಯ ನಡೆಸುತ್ತಾ ಜೆಪ್ಪಿನಮೊಗರು ಜಂಕ್ಷನ್ ಕಡೆಯಿಂದ ಕಲ್ಲಾಪು ಕಡೆಗೆ ಹೋಗುತ್ತಿದ್ದಾಗ ಕಡೆಕಾರ್ ಕ್ರಾಸ್ ಬಳಿ ಆರೋಪಿಗಳು ನಿಂತಿದ್ದರು. ಪೊಲೀಸ್ ವಾಹನವನ್ನು ನೋಡಿ ಓಡಿ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆರೋಪಿಗಳನ್ನು ವಿಚಾರಿಸಿದಾಗ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಪಿಸ್ತೂಲ್ ಹಾಗೂ 6 ಸಜೀವ ಗುಂಡುಗಳನ್ನು ಹೊಂದಿರುವುದು ಕಂಡುಬಂದಿದೆ.

ಕುತ್ತಾರ್ ನಿವಾಸಿ ಅಜೀಜ್ ಆಗ್ರಾಕ್ಕೆ ಹೋಗಿ ಅನಂತರ ಅಲ್ಲಿಗೆ ಅಬ್ದುಲ್ ಖಾದರ್‌ನನ್ನು ಕರೆಯಿಸಿಕೊಂಡಿದ್ದ. ಅಲ್ಲಿಂದ 2025ರ ಮಾರ್ಚ್‌ನಲ್ಲಿ ಅವರೀರ್ವರು ಪಿಸ್ತೂಲ್ ಮತ್ತು ಮದ್ದುಗುಂಡುಗಳೊಂದಿಗೆ ರೈಲಿನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ ಅಜೀಜ್ ಕುಮಟಾ ಬಳಿ ಹೃದಯಾಘಾತದಿಂದ ಮೃತಪಟ್ಟಿದ್ದ. ಅನಂತರ ಅಜೀಜ್‌ನ ಸೋದರ ಸಂಬಂಧಿ ಹಮೀದ್ ಎಂಬಾತ ಅಬ್ದುಲ್ ಖಾದರ್‌ನಿಂದ ಪಿಸ್ತೂಲ್‌ನ್ನು ಕೇಳಿ ಪಡೆದುಕೊಂಡು ಅದನ್ನು ಆತನ ವಶದಲ್ಲಿಟ್ಟುಕೊಂಡಿದ್ದ. ಕೆಲವು ದಿನಗಳ ಅನಂತರ ಅದನ್ನು ಬೋಳಾರದ ತೌಸಿಫ್‌ನಿಗೆ ನೀಡಿದ್ದ. ಬೋಳಾರದ ತೌಸಿಫ್ ಜು.31ರಂದು ತೌಸಿಫ್ ಅಹಮ್ಮದ್ ಎಂಬಾತನಿಗೆ ನೀಡಿ ಅದನ್ನು ಹಮೀದ್‌ಗೆ ನೀಡುವಂತೆ ಹೇಳಿದ್ದ. ಅದರಂತೆ ತೌಸಿಫ್ ಅಹಮ್ಮದ್ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಹಮೀದ್‌ಗೆ ನೀಡುವುದಕ್ಕೆಂದು ಬಂದಿದ್ದ. ಈ ವೇಳೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

===============