ಮಂಗಳೂರು: ಪ್ರೇಯಸಿ ತನ್ನ ಜತೆ ಸುತ್ತಾಡಲು ಬಂದಿಲ್ಲ ಎನ್ನುವ ಸಿಟ್ಟಿನಲ್ಲಿ ಯುವಕ ಪಿಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ಹಾನಿ ಮಾಡಿದ ಘಟನೆ ನಗರದ ಆಗ್ನೆಸ್ ಕಾಲೇಜು ಬಳಿ ಗುರುವಾರ ರಾತ್ರಿ ನಡೆದಿದೆ.
ಸುಳ್ಯ ಮೂಲದ ವಿವೇಕ್ (18) ಎಂಬ ಯುವಕ ಕೃತ್ಯ ಎಸಗಿದ್ದು ಸ್ಥಳೀಯರು ಹಿಡಿದು ಆತನಿಗೆ ಥಳಿಸಿದ್ದಾರೆ. ಈತ ಮಂಗಳೂರಿನಲ್ಲಿ ಲೈಟಿಂಗ್ ಕೆಲಸ ಮಾಡುತ್ತಿದ್ದು, ಆಗ್ನೆಸ್ ಬಳಿಯ ವಿದ್ಯಾರ್ಥಿನಿಯರ ಪಿಜಿ ಹಾಸ್ಟೆಲ್‌ನಲ್ಲಿ ಕೆಲಸಕ್ಕಿದ್ದ ಯುವತಿಯ ಜೊತೆಗೆ ಪ್ರೀತಿ ಹೊಂದಿದ್ದ. ಗುರುವಾರ ಸಂಜೆ ಆಕೆಗೆ ಫೋನ್ ಮಾಡಿ, ಹೊರಗೆ ಸುತ್ತಾಡಲು ಬರುವಂತೆ ಕೇಳಿಕೊಂಡಿದ್ದ.
ಆದರೆ ಯುವತಿ ನಿನ್ನ ಜೊತೆಗೆ ಬರುವುದಿಲ್ಲ ಎಂದು ಹೇಳಿ ನಿರಾಕರಣೆ ಮಾಡಿದ್ದಳು. ಪದೇ ಪದೇ ಕರೆ ಮಾಡಿದರೂ ಕೆಲಸ ಇದೆಯೆಂದು ಹೇಳಿ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಯುವಕ ಪಿಜಿ ಹಾಸ್ಟೆಲ್ ಮೇಲೆ ಕಲ್ಲು ತೂರಿದ್ದಾನೆ. ಹಾಸ್ಟೆಲ್ ಕಿಟಕಿ, ಗಾಜು ಒಡೆದು ಹೋಗಿದ್ದು ದಾಂಧಲೆಗೆ ಯತ್ನಿಸಿದ ಯುವಕನನ್ನು ಕೂಡಲೇ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಬಳಿಕ ಕದ್ರಿ ಪೊಲೀಸರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಮಲು ಪದಾರ್ಥ ಸೇವಿಸಿದ ಮತ್ತಿನಲ್ಲಿ ಕಲ್ಲು ತೂರಾಟ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.