ಜಿಲ್ಲೆ

‘24 ತುಂಡು ಮಾಡುವೆ’ ಎಂದು ಬೆದರಿಕೆ ಹಿನ್ನೆಲೆ ಡೆತ್ ನೊಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನ

ಮಂಗಳೂರು: ಅನ್ಯ ಕೋಮಿನ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ 24 ತುಂಡು ಮಾಡುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸುರತ್ಕಲ್ ಇಡ್ಯಾದ ಯುವತಿ ಗುರುವಾರ ರಾತ್ರಿ ಡೆತ್ ನೊಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಯುವತಿಯ ಅಣ್ಣನಿಗೆ ಯುವಕ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶ ಹಾಕುತ್ತಿದ್ದನು. ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲದಿದ್ದರೆ ಆಕೆಯನ್ನು 24 ತುಂಡು ಮಾಡುವೆ ಎಂದು ಯುವತಿಯ ಅಣ್ಣ ಕಿಶನ್‌ಗೆ ಅನ್ಯ ಕೋಮಿನ ಯುವಕ ಬೆದರಿಕೆ ಸಂದೇಶ ಕಳುಹಿಸಿದ್ದನು.

ಬೆದರಿಕೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸದಾಶಿವ ನಗರದ ಶಾರಿಕ್ ಹಾಗೂ ನೂರ್ಜಹಾನ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷೃ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಅವರಿಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ. ಈ ಬಳಿಕವೂ ಯುವತಿಯ ಸಹೋದರನಿಗೆ ನಿರಂತರ ಬೆದರಿಕೆ ಸಂದೇಶ ಬಂದಿದೆ. ಗುರುವಾರ ರಾತ್ರಿ 1 ಗಂಟೆಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ‘ನಿನ್ನ ತಂಗಿಯನ್ನು ಬಿಡುವುದಿಲ್ಲ’ ಎಂದು ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಬೆಳಗ್ಗಿನ ಜಾವ 3.30ಕ್ಕೆ ಡೋಲೊ-650 ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಡೆತ್ ನೋಟ್ ಪತ್ತೆ: ಇಡ್ಯಾ ನಿವಾಸಿ, ಮುಸ್ಲಿಂ ಸಮುದಾಯದ ಯುವಕ ಕಿರುಕುಳ ನೀಡುತ್ತಿದ್ದಾನೆ. ಪೊಲೀಸರಿಂದಲೂ ಯಾವುದೇ ನ್ಯಾಯ ಸಿಕ್ಕಿಲ್ಲ. ಒಬ್ಬ ಮುಸ್ಲಿಮನ ಕೈಯಲ್ಲಿ ಅತ್ಯಾಚಾರ ಆಗಿ ಸಾಯುವ ಬದಲು ಈಗಲೇ ಸಾಯುತ್ತೇನೆ. ಶಾರೀಕ್ ಹಾಗೂ ನೂರ್ಜಾನ್ ಇಬ್ಬರನ್ನೂ ಬಿಡಬಾರದು ಎಂದು ಯುವತಿ ಡೆತ್ ನೋಟಲ್ಲಿ ಬರೆದಿದ್ದಾಳೆ.

ಯುವತಿ ಚಿಕಿತ್ಸೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಹಿಂದೂ ಸಂಘಟನೆಗಳ ಖಂಡನೆ: ಇದೊಂದು ಲವ್ ಜಿಹಾದ್ ಆಗಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ವಹಿಸದೆ ಇರುವುದು ಅವರ ವೈಫಲ್ಯವಾಗಿದೆ. ಇನ್ನಾದರೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.