ಜಿಲ್ಲೆ

ಯೋಗಾಸನ ಒಂದೇ ದಿನ ಎರಡು ವಿಶ್ವ ದಾಖಲೆ ಕುಶಾಲಪ್ಪ ಗೌಡರಿಂದ ಎರಡು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್

ಮಂಗಳೂರು: ಯೇನೆಪೋಯ ಮೆಡಿಕಲ್ ಕಾಲೇಜಿನ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಿದ್ದ 25 ಗಂಟೆಗಳ ಮ್ಯಾರಥಾನ್ ಯೋಗ ಬೊಧನೆಯಲ್ಲಿ ಯೋಗ ಗುರು ಕುಶಾಲಪ್ಪ ಗೌಡ ಅವರು ಎರಡು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.


ಜು.22ರಂದು ಬೆಳಗ್ಗೆ 9 ಗಂಟೆಗೆ ಆರಂಭಗೊಂಡ ಯೋಗ ಬೋಧನೆ ಜು.23ರಂದು ಬೆಳಗ್ಗೆ 10 ಗಂಟೆಗೆ ಕೊನೆಗೊಂಡಿತ್ತು. ನಿರಂತರ ಹಗಲು, ರಾತ್ರಿ ಒಟ್ಟು 25 ಗಂಟೆ ಅವಧಿಯಲ್ಲಿ ತರಬೇತಿ ನೀಡಿ ದೀರ್ಘಾವಧಿಯ ಯೋಗ ಪಾಠ ಎಂಬ ಶೀರ್ಷಿಕೆಯಲ್ಲಿ ಕುಶಾಲಪ್ಪ ಗೌಡ ಅವರು ವೈಯುಕ್ತಿಕ ವಿಶ್ವ ದಾಖಲೆ ಸಾಧಿಸಿದ್ದಾರೆ.


ಎರಡನೇ ದಾಖಲೆಯಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ 25 ಗಂಟೆಗಳ ಅವಧಿಯಲ್ಲಿ ತಲಾ ಒಂದೂವರೆ ಗಂಟೆ ಯೋಗ ಶಿಕ್ಷಣ ನೀಡುವ ಮೂಲಕ ‘ಮೋಸ್ಟ್ ಹೆಲ್ತ್ ಕೇರ್ ಪ್ರೊಫೆಶನಲ್ಸ್ ಎಟೆಂಡಿಂಗ್ ಯೋಗ ಸೆಷನ್ಸ್ ಎಂಬ ಶೀರ್ಷಿಕೆಯಲ್ಲಿ ಯೇನೆಪೋಯ ಮೆಡಿಕಲ್ ಕಾಲೇಜು ಸಂಸ್ಥೆಗೆ ಎರಡನೇ ವಿಶ್ವ ದಾಖಲೆಯನ್ನು ಘೋಷಿಸಲಾಗಿದೆ.


ಎರಡೂ ದಾಖಲೆಗಳನ್ನು ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ಮ್ಯಾನೇಜ್‌ಮೆಂಟ್ ಜಡ್ಜ್, ಏಷಿಯಾ ಹೆಡ್ ಡಾ.ಮನಿಷ್ ವಿಶ್ನೋಲ್ ಖುದ್ದು 25 ಗಂಟೆ ದಾಖಲೆ ನಡೆದ ಯೇನೆಪೋಯ ಸಭಾಂಗಣದಲ್ಲಿ ವೀಕ್ಷಣೆ ಮಾಡಿ ದಾಖಲೆಗಳನ್ನು ಘೋಷಿಸಿದ್ದಾರೆ.