ಮಂಗಳೂರು: ವೆನ್ಲಾಕ್ ಆಸ್ಪತ್ರೆಯ 176 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು, ಮೆದುಳು ನಿಷ್ಕ್ರಿಯಗೊಂಡ ಶಿವಮೊಗ್ಗದ ಮಹಿಳೆಯೊಬ್ಬರ ಎರಡು ಕಣ್ಣುಗಳನ್ನು ಹಾಗೂ ಲಿವರನ್ನು ಎರಡು ಆಸ್ಪತ್ರೆಗಳಿಗೆ ಶುಕ್ರವಾರ ದಾನ ಮಾಡಲಾಯಿತು.
ಲಿವರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಮಧ್ಯಾಹ್ನ 12.40ಕ್ಕೆ ವೆನ್ಲಾಕ್ ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಗ್ರೀನ್ ಕಾರಿಡಾರ್ ಟ್ರಾಫಿಕ್ ಸಂಚಾರ ವ್ಯವಸ್ಥೆ ಮೂಲಕ ತ್ವರಿತವಾಗಿ ಮೈಸೂರಿಗೆ ಕೊಂಡೊಯ್ಯಲಾಯಿತು. ಮಹಿಳೆಯ ಎರಡು ಕಣ್ಣುಗಳನ್ನು ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಇಬ್ಬರು ವ್ಯಕ್ತಿಗಳ ದೃಷ್ಟಿಗೆ ವರದಾನವಾಗಲಿದೆ.
ಮಂಗಳೂರಿನಿಂದ ಮಾಣಿ, ಮಡಿಕೇರಿ ಹೆದ್ದಾರಿಯುದ್ಧಕ್ಕೂ ಪೊಲೀಸರು ಟ್ರಾಫಿಕ್ ತಡೆಹಿಡಿದು ಆಂಬ್ಯುಲೆನ್ಸ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸುಮಾರು ನಾಲ್ಕು ಗಂಟೆ ಅವಧಿಯಲ್ಲಿ ಆಂಬುಲೆನ್ಸ್ ಮೈಸೂರು ತಲುಪಿತು. ಆಂಬ್ಯುಲೆನ್ಸನ್ನು ಮೈಸೂರಿನ ವೆಂಕಟೇಶ್ ಎಂಬವರು ಚಲಾಯಿಸಿದ್ದು, ಆರೋಗ್ಯ ಸಿಬ್ಬಂದಿ ಸಂದೀಪ್ ಜತೆಗಿದ್ದರು.
ಬೆಂಗಳೂರಿನ ಅಪೋಲೊ ಆಸ್ಪತ್ರೆಯ ಸರ್ಜನ್ ಡಾ.ರಾಜು ಗೌಡ ಅವರ ನೇತೃತ್ವದ ತಂಡ ಮಂಗಳೂರಿಗೆ ಬಂದು ಶುಕ್ರವಾರ ಬೆಳಗ್ಗೆ ಮಹಿಳೆಯ ಲಿವರನ್ನು ತೆಗೆದಿದ್ದಾರೆ. ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಮಹಿಳೆಯ ಲಿವರ್‌ನ್ನು ಬೇರೊಬ್ಬರಿಗೆ ಕಸಿ ಮಾಡುವ ಪ್ರಕ್ರಿಯೆಗೆ ಈ ಅಂಗಾಂಗ ದಾನ ಮಾಡಲಾಗಿದೆ. ಈ ಅಂಗಾಂಗ ಕಸಿಗೆ 40 ರಿಂದ 45 ಲಕ್ಷ ರೂ. ವೆಚ್ಚಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಣ್ಣು ಕೆಎಂಸಿಗೆ ರವಾನೆ:
ಮಹಿಳೆಯ ಎರಡು ಕಣ್ಣುಗಳನ್ನು ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾನ ಮಾಡಲಾಗಿದೆ. ಡಾ.ಸುಮನಾ ಕಾಮತ್ ನೇತೃತ್ವದಲ್ಲಿ ಕಣ್ಣಿನ ಸರ್ಜರಿ ಮಾಡಿದ್ದಾರೆ. ಎರಡು ಕಣ್ಣುಗಳನ್ನು ದೃಷ್ಟಿ ಕಳಕೊಂಡ ಇಬ್ಬರಿಗೆ ಮರು ಜೋಡಿಸಲಾಗುತ್ತದೆ. ಕೆಎಂಸಿ ಆಸ್ಪತ್ರೆಯಲ್ಲಿ ಕಸಿ ಮಾಡಿಸಿಕೊಳ್ಳುವವರು ಇಲ್ಲದಿದ್ದರೆ, ಮಂಗಳೂರಿನ ಬೇರೆ ಆಸ್ಪತ್ರೆಗಳಿಗೆ ತ್ವರಿತಗತಿಯಲ್ಲಿ ಕಣ್ಣುಗಳನ್ನು ರವಾನಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಂಗಾಂಗ ದಾನ ಮಾಡಿದ ರೇಖಾ ಕುಟುಂಬ
ಮೆದುಳು ನಿಷ್ಕ್ರಿಯಗೊಂಡ ಮಹಿಳೆ ರೇಖಾ (41) ಶಿವಮೊಗ್ಗದ ರಾಗಿಗುಡ್ಡ ನಿವಾಸಿ. ಇವರದು ಬಡ ಕುಟುಂಬವಾಗಿದ್ದು, ಈಕೆಗೆ ಇಬ್ಬರು ಸಹೋದರರು ಇದ್ದಾರೆ. ಅವಿವಾಹಿತೆಯಾದ ಈಕೆ ತಾಯಿಯ ಮನೆಯಲ್ಲಿ ವಾಸವಿದ್ದರು. ಕೆಲವು ದಿನಗಳ ಹಿಂದೆ ಈಕೆಗೆ ತಲೆಯಲ್ಲಿ ರಕ್ತಹೆಪ್ಪುಗಟ್ಟಿತ್ತು. ಹಾಗಾಗಿ ರೇಖಾಳನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಭಾನುವಾರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೆನ್ಲಾಕ್‌ನಲ್ಲಿ ರೇಖಾಗೆ ಗುರುವಾರ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೇ ರಕ್ತಹೆಪ್ಪುಗಟ್ಟುವಿಕೆ ಉಲ್ಭಣಿಸಿ ಮೆದುಳು ನಿಷ್ಕ್ರೀಯಗೊಂಡಿತ್ತು. ಬಳಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಆಕೆಯ ಕುಟುಂಬವನ್ನು ಸಂಪರ್ಕಿಸಿ ಅಂಗಾಂಗ ದಾನಕ್ಕೆ ಮನ ಒಲಿಸಿದ್ದರು. ಅಂಗಾಂಗ ದಾನದಿಂದ ಬೇರೊಬ್ಬರಿಗೆ ಉಂಟಾಗುವ ಪ್ರಯೋಜನವನ್ನು ಮನದಟ್ಟು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ರೇಖಾಳ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದರು.
ವೈದ್ಯರಿಂದ ಕೃತಜ್ಞತೆ
ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿರುವುದಕ್ಕೆ ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ಶಿವಪ್ರಕಾಶ್ ಅವರು ರೇಖಾ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಶವವನ್ನು ಆಸ್ಪತ್ರೆಯಿಂದ ಬಿಟ್ಟು ಕೊಡುವ ಸಂದರ್ಭ ಮಾತನಾಡಿದ ಅವರು, ಮನುಷ್ಯನಿಗೆ ಸಾವು ಸಹಜ. ಆದರೆ ಅಂಗಾಂಗ ದಾನದ ಮೂಲಕ ಇನ್ನೊಂದು ಜೀವ ಉಳಿಸುವುದು ಶ್ರೇಷ್ಠ ಎಂದರು. ಡಾ.ಅಣ್ಣಯ್ಯ ಕುಲಾಲ್ ಹಾಗೂ ಇತರ ವೈದ್ಯರು ಬಡ ಕುಟುಂಬಕ್ಕೆ ಒಂದಷ್ಟು ಧನಸಹಾಯ ಮಾಡಿ, ಶಿವಮೊಗ್ಗಕ್ಕೆ ಶವ ಕೊಂಡೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟು ಅಂತ್ಯಕ್ರಿಯೆಗೆ ನೆರವಾಗಿದ್ದಾರೆ.
ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಶಿವಪ್ರಕಾಶ್, ನೋಡೆಲ್ ಅಧಿಕಾರಿ ಡಾ.ಅಜಯ್ ಕುಮಾರ್, ಸರ್ಜಿಕಲ್ ಬ್ಲಾಕ್‌ನ ವೈದ್ಯಾಧಿಕಾರಿ ಡಾ.ಭಾನುಪ್ರಕಾಶ್, ಕೆಎಂಸಿ ವೈದ್ಯರಾದ ಡಾ.ಮೇಘನಾ ಮಡಿ ಮೊದಲಾದವರಿದ್ದರು.