ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕಿಗಳಲ್ಲಿ ಈ ವರ್ಷ ಸಂಚಾರಿ ಆಯುಷ್ ಘಟಕ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ದ.ಕ. ವತಿಯಿಂದ ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಲಾದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಹಾಗೂ ಎಂಆರ್‌ಪಿಎಲ್ ಸಂಸ್ಥೆ ಕೊಡುಗೆ ನೀಡಿದ ವಿವಿಧ ಸೌಲಭ್ಯಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನಲ್ಲಿ ಈ ವರ್ಷ ಸಂಚಾರಿ ಆಯುಷ್ ಘಟಕ ಆರಂಭಗೊಳ್ಳಲಿದೆ. ಇದರಲ್ಲಿ ಒಬ್ಬ ವೈದ್ಯರು ಮತ್ತು ಮಲ್ಟಿ ಪರ್ಪಸ್ ವರ್ಕರ್ ಹಾಗೂ ಔಷಧ ಇದ್ದು, ತಾಲೂಕಿನ 8 ಗ್ರಾಮಗಳನ್ನು ರೊಟೇಶನ್ ಮಾದರಿಯಲ್ಲಿ ತಲುಪಲಾಗುವುದು ಎಂದರು.
ಹಲವು ಖಾಯಿಲೆಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡುವ ದೇಶದ ಪ್ರಮುಖ ಆಸ್ಪತ್ರೆಯಾಗಿ ಮಂಗಳೂರಿನ ಆಯುಷ್ ಆಸ್ಪತ್ರೆ ಗುರತಿಸಿಕೊಂಡಿದೆ. ಇಲ್ಲಿ ಆಪರೇಷನ್ ಥಿಯೇಟರ್, ಫಿಸಿಯೋಥೆರಪಿ ವಿಭಾಗ, ಪ್ರಯೋಗಾಲಯ ಸೇರಿದಂತೆ ಮೂಲಭೂತ ವ್ಯವಸ್ಥೆಗಳು ಸುಸಜ್ಜಿತ ರೀತಿಯಲ್ಲಿ ನಿರ್ಮಾಣಗೊಂಡಿದೆ. ದೇಸಿಯ ಸಾಂಪ್ರದಾಯಿಕ ಪದ್ಧತಿ, ಚಿಕಿತ್ಸೆಯನ್ನು ಮೇಲ್ದರ್ಜೆಗೇರಿಸಬೇಕು, ಈ ಚಿಕಿತ್ಸಾ ಪದ್ಧತಿಯಲ್ಲಿ ಮತ್ತಷ್ಟು ಆವಿಷ್ಕಾರಗಳು ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದಲೂ ಪ್ರೋತ್ಸಾಹ ನೀಡಲಾಗುವುದು ಎಂದರು.
ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಆಯುಷ್ ಆಸ್ಪತ್ರೆಯಲ್ಲಿ ಸುಸಜ್ಜಿತ ಶಸಚಿಕಿತ್ಸಾ ವಿಭಾಗವನ್ನು ಆರಂಭಿಸಲಾಗುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಆಯುರ್ವೇದ ಶಸಚಿಕಿತ್ಸಾ ತಜ್ಞರ ಸೇವೆಯನ್ನು ಬಳಸಿಕೊಳ್ಳಲಾಗುವುದು. ರೋಗಿಗಳಿಗೆ ಆಯುರ್ವೇದದ ಕ್ಷಾರ ಸೂತ್ರ, ಅಗ್ನಿಕರ್ಮ, ಶಸಚಿಕಿತ್ಸೆ, ಭಗಂದರ, ಪಿಸ್ಟುಲಾ, ಮೂಲವ್ಯಾಧಿಗಳಿಗೆ ಶಸಚಿಕಿತ್ಸೆ, ವಾಸಿಯಾಗದ ಗಾಯಗಳ ಚಿಕಿತ್ಸೆ, ಮಧುಮೇಹಿಗಳ ವೃಣಚಿಕಿತ್ಸೆ, ಮಧುಮೇಹಿಗಳಿಗೆ ಪಾದದ ಆರೈಕೆ, ಹಿಜಾಮರೆಜಿಮಿನಲ್ ಥೆರಪಿ ಮುಂತಾದವುಗಳನ್ನು ಸುಸಜ್ಜಿತ ಶಸ ಚಿಕಿತ್ಸಾ ಕೊಠಡಿಯಲ್ಲಿ ಒದಗಿಸಲಾಗುವುದು. ವಾತ ರೋಗ, ಪಕ್ಷಾಘಾತ ಮುಂತಾದ ರೋಗಗಳ ಚಿಕಿತ್ಸೆಗೆ ಸುಸಜ್ಜಿತ ಪಿಸಿಯೋಥೆರಪಿ ಕೇಂದ್ರವನ್ನು ಆರಂಭಿಸಲಾಗುವುದು. ರೋಗಿಗಳಿಗೆ ಎಲ್ಲಾ ರೀತಿಯ ರಕ್ತತಪಾಸಣೆಗೆ ಆಧುನಿಕ ಪ್ರಯೋಗಾಲಯ ವ್ಯವಸ್ಥೆ ಇದೆ ಎಂದರು.
ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಮನಪಾ ಸದಸ್ಯ ಎ.ಸಿ. ವಿನಯರಾಜ್, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಮನಪಾ ಸದಸ್ಯರಾದ ಅನಿಲ್ ಕುಮಾರ್, ಸಂಶುದ್ದೀನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ್, ವೆನ್ಲಾಕ್ ಡಿಎಂಒ ಜೆಸಿಂತ, ಎಂಆರ್‌ಪಿಎಲ್ ನಿಯೋಜಿತ ಆಡಳಿತ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಸಹಿತ ವಿವಿಧ ಅಧಿಕಾರಿಗಳು ಇದ್ದರು.