ಗುರುಪುರ: ಕುಪ್ಪೆಪದವು ಪರಿಸರದಲ್ಲಿ ಶನಿವಾರ ಚಿಪ್ಪು ಮೀನು ಅಥವಾ ಮರುವಾಯಿ ಸೇವಿಸಿ ಹಲವರು ಅಸ್ವಸ್ಥಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಳಿ ಅಥವಾ ತುಳುವಿನಲ್ಲಿ ಮರುವಾಯಿ ಎಂದು ಕರೆಯಲ್ಪಡುವ ಚಿಪ್ಪು ಮೀನು ಖರೀದಿಸಿ ಪದಾರ್ಥ ಮಾಡಿ ತಿಂದ ಮೇಲೆ ಕೆಲವರು ಅಸ್ವಸ್ಥಗೊಂಡಿದ್ದು, ಕೋವಿಡ್ ಭೀತಿಯಿಂದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ತೀವ್ರ ಅಸ್ವಸ್ಥಗೊಂಡ ಒಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮರುವಾಯಿ ತಿಂದ ಜನರಲ್ಲಿ ತಲೆ ಸುತ್ತಲಾರಂಭಿಸಿದ್ದು, ಕಣ್ಣು ಮಂಜಾಗಿ, ವಾಂತಿಯೂ ಆಗಿದೆ ಎಂದು ಚಿಕಿತ್ಸೆ ಪಡೆದುಕೊಂಡಿರುವ ರಂಜನಿ ಕುಲವೂರು ತಿಳಿಸಿದ್ದಾರೆ.
ರಾಸಾಯನಿಕ ಸಿಂಪಡಣೆ?: ಮರುವಾಯಿ ಸಂರಕ್ಷಿಸಿಡಲು ರಾಸಾಯನಿಕ ಸಿಂಪಡಿಸಲಾಗುತ್ತಿದ್ದು, ಇದರಿಂದ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಿರಣ್ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರಕ್ಕೆ ಯಾರೊಬ್ಬರೂ ಚಿಕಿತ್ಸೆಗೆ ಬಂದಿಲ್ಲ. ಫುಡ್ ಪಾಯಿಸನ್ ಆಗಿರುವ ಬಗ್ಗೆ ಕೆಲವರು ಮಾಹಿತಿ ನೀಡಿದ್ದಾರೆ. ಅನಾರೋಗ್ಯ ಪೀಡಿತರು ಕೇಂದ್ರಕ್ಕೆ ಬಂದಲ್ಲಿ ಚಿಕಿತ್ಸೆ ನೀಡಲಾಗುವುದು. ಕೋವಿಡ್ ಬಗ್ಗೆ ಭೀತಿಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.