ಮಂಗಳೂರು: ದೇಶದಲ್ಲಿ ಧರ್ಮ, ಜಾತಿ, ಭಾಷೆ, ಲಿಂಗ ಆಧಾರಿತ ರಾಜಕಾರಣ ಅಧಃಪತನಕ್ಕೆ ಕಾರಣವಾಗುತ್ತಿದ್ದು, ಮೌಲ್ಯಾಧಾರಿತ, ಅಹಿಂಸಾತ್ಮಕ ಸಮಾಜ ಕಟ್ಟಲು ಯುವ ಜನತೆ ಸಜ್ಜಾಗಬೇಕು ಎಂದು ಮಹಾತ್ಮ ಗಾಂಧೀಜಿಯವರ ಮರಿಮಗ ಹಾಗೂ ಸಾಮಾಜಿಕ ಚಿಂತಕ ತುಷಾರ್ ಗಾಂಧಿ ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಮಂಗಳೂರು ವಿವಿ, ರಾಷ್ಟ್ರೀಯ ಸೇವಾ ಯೋಜನೆ, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕೆದಂಬಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವಿವಿ ಕಾಲೇಜು ಸಭಾಂಗಣದಲ್ಲಿ ನಡೆದ ವಿಚಾರಣ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ದೇಶ ಸ್ವಾತಂತ್ರೃ ಪಡೆದು 78 ವರ್ಷಗಳಾದರೂ ನಮ್ಮಲ್ಲಿ ಏಕತೆ ಮೂಡಿಲ್ಲ. ಚುನಾವಣೆಗಳಲ್ಲಿ ಧರ್ಮ, ಜಾತಿಗೆ ಹೆಚ್ಚು ಆದ್ಯತೆ ಸಿಗುತ್ತಿದ್ದು, ಸಾಮರ್ಥ್ಯ ಆಧಾರಿತ ನಾಯಕರ ಆಯ್ಕೆಯಾಗುತ್ತಿಲ್ಲ. ಜನರನ್ನು ವಿಭಜಿಸಿ ಆಳುವ ಪದ್ಧತಿ ಇನ್ನೂ ನಿರ್ಮೂಲನೆಯಾಗಿಲ್ಲ. ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರೋಧವಾಗಿದೆ ಎಂದರು.
ಮೂರು ಭಾರಿ ಗಾಂಧೀಜಿ ಭೇಟಿ ನೀಡಿರುವ ಮಂಗಳೂರಿನಲ್ಲಿಯೂ ಇಂದು ಮೂಲಭೂತವಾದ ವಿಜೃಂಭಿಸುತ್ತಿದೆ. ಗಾಂಧಿಯನ್ನು ಹತ್ಯೆ ಮಾಡಿದವರ ಸಿದ್ಧಾಂತಗಳು ಇಲ್ಲಿ ಮರೆಯುವ ಮೂಲಕ ಗಾಂಧಿ ಸಂದೇಶಗಳು ಮರೆಯಾಗಿರುವುದು ನಾಚಿಕೆಗೇಡಿನ ವಿಚಾರ ಎಂದು ತುಷಾರ್ ಗಾಂಧಿ ಉಲ್ಲೇಖಿಸಿದರು
ಮೌಲ್ಯಾಧಾರಿತ ರಾಜಕಾರಣ ಅವಶ್ಯ
ಚುನಾಯಿತ ಪ್ರತಿನಿಧಿಗಳು ದೇಶದ ಸಂವಿಧಾನಕ್ಕೆ ಗೌರವ ನೀಡಿ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕಾಗಿದೆ. ಪ್ರಸ್ತುತ ಮೌಲ್ಯಾಧಾರಿತ ರಾಜಕರಾಣದ ಅಗತ್ಯತೆ ಇದೆ. ಜನಪ್ರತಿನಿಧಿಗಳು ಜನರ ಕುಂದು ಕೊರತೆಗಳಿಗೆ ದನಿಯಾಗಬೇಕು. ಕೇವಲ ಒಂದು ವರ್ಗದವರನ್ನಷ್ಟೇ ಪರಿಗಣಿಸುವುದು ವ್ಯವಸ್ಥೆಗೆ ವಿರೋಧವಾಗಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಪರಸ್ಪರ ದ್ವೇಷ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಯುವಶಕ್ತಿ ಜಾಗೃತರಾಗಿ ಸಮರ್ಥ ನಾಯಕತ್ವದೊಂದಿಗೆ ಬೆಳೆಯುವ ಅನಿವಾರ್ಯತೆ ಇದೆ ಎಂದರು.
ರಾಜಕೀಯ ದುರುದ್ದೇಶಗಳಿಗೆ ಅಪರಾಧ ಪ್ರಕರಣಗಳಲ್ಲಿ ಅಮಾಯಕರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಸಮಾನತೆ ಮರೆಯಾಗಿ ವಿಐಪಿ ಸಂಸ್ಕೃತಿ ಹೆಚ್ಚುತ್ತಿದೆ. ಚರ್ಚೆ ಇಲ್ಲದೆ ಶಾಸನಗಳು ರೂಪುಗೊಳ್ಳುತ್ತಿವೆ. ಆದರೂ ನಾವು ಮೌನ ವಹಿಸಿದ್ದೇವೆ. ಇದೇ ಅವರಿಗೆ ಬಂಡವಾಳವಾಗುತ್ತಿದೆ. ಇಂತಹ ವಿಚಾರಗಳ ಬಗ್ಗೆ ಚರ್ಚೆ ಆಗಬೇಕು. ಯುವ ಜನತೆ ಸ್ವಯಂ ಸ್ಪೂರ್ತಿಯಿಂದ ದೇಶದ ಜವಾಬ್ದಾರಿ ತೆಗೆದುಕೊಂಡು ಹೋರಾಟಗಳನ್ನು ಸಂಘಟಿಸುವ ಅಗತ್ಯವಿದೆ ಎಂದು ತುಷಾರ್ ಗಾಂಧಿ ಪ್ರತಿಪಾದಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ದಿಕ್ಸೂಚಿ ಭಾಷಣಗೈದರು. ದೇಶಕ್ಕೆ ಮಹಾತ್ಮ ಗಾಂಧೀಜಿಯ ಬಳಿಕ ಇದುವರೆಗೆ ಉತ್ತಮ ನಾಯಕ ಸಿಕ್ಕಿಲ್ಲ. ಏಕತೆ, ಸಮಗ್ರತೆಯನ್ನು ಪುನರ್‌ಸ್ಥಾಪಿಸಿ ಪ್ರಜ್ಞಾವಂತ ನಾಗರಿಕರ ದೇಶ ಕಟ್ಟಲು ಎರಡನೇ ಸ್ವಾತಂತ್ರೃ ಸಂಗ್ರಾಮ ನಡೆಯಬೇಕಾಗಿದೆ. ದುಷ್ಟಶಕ್ತಿಗಳನ್ನು ನಿಗ್ರಹಿಸಿ ಸಂವಿಧಾನ ಉಳಿಸಬೇಕಾಗಿದೆ. ಕಟ್ಟ ಕಡೆಯ ವ್ಯಕ್ತಿ ಕೂಡಾ ಘನತೆಯಿಂದ ಬಾಳ್ವೆ ನಡೆಸಲು ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
‘ಆನ್ ದಿ ಟ್ರಾಯಲ್ ಆಫ್ ಗಾಂಧೀಸ್ ಫುಟ್‌ಸ್ಟೆಫ್ಸ್’ ಮತ್ತು ‘ಬಿಫೋರ್ ಐ ರಿಟರ್ನ್ ಟು ದಿ ಸಾಯಿಲ್’ ಪುಸ್ತಕವನ್ನು ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಬಿಡುಗಡೆಗೊಳಿಸಿದರು.
ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಸಂಸ್ಥಾಪಕ ಪ್ರಮೋದ್ ಕುಮಾರ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಉಪಸ್ಥಿತರಿದ್ದರು.
ಮಂಗಳೂರು ವಿವಿ ಎನ್‌ಎಸ್‌ಎಸ್‌ನ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಶೇಷಪ್ಪ ಕೆ. ವಂದಿಸಿದರು. ಆರ್‌ಜೆ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.