ಮಂಗಳೂರು: ವಿ.ಟಿ.ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಶುದ್ಧ ಪಂಚಮಿಯಿಂದ ದ್ವಾದಶಿವರೆಗೆ ಅಂದರೆ ನ.6 ರಿಂದ 13ರ ವರೆಗೆ ನಡೆಯುವ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಬುಧವಾರ ಆರಂಭಗೊಂಡಿತು.
ಬೆಳಗ್ಗೆ ದೀಪ ಬೆಳಗಿಸುವ ಮೂಲಕ ಭಜನಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ ಮತ್ತು ರಾತ್ರಿ ಭಜನಾ ದಿಂಡಿಯು ಶ್ರೀ ವೆಂಕಟರಮಣ ದೇವಳದಿಂದ ಹೊರಟು ಶ್ರೀ ಮಹಮಾಯಿ ದೇವಳವಾಗಿ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನಕ್ಕೆ ಆಗಮಿಸಿತು. ಇದು ಸಪ್ತಾಹ ದಿನಗಳಲ್ಲಿ ಪ್ರತಿ ದಿನ ನಡೆಯಲಿದೆ.
ನ.9 ರಂದು ಶ್ರೀ ದೇವರಿಗೆ ಲೋಕಕಲ್ಯಾಣಾರ್ಥ ಗಂಧಲೇಪನ ಸೇವೆ ನಡೆಯಲಿದೆ. ನ.12ರಂದು ಬೆಳಗ್ಗೆ 11 ಗಂಟೆಗೆ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಹೊರೆಕಾಣಿಕೆ ಮೆರವಣಿಗೆ, ರಾತ್ರಿ ಪೂಜೆ ಬಳಿಕ ಪಟ್ಟೆಮಡಿ ವಸ್ತ್ರ ಹಾಗೂ ಇತರ ವಸ್ತುಗಳನ್ನು ಪ್ರಸಾದ ರೂಪದಲ್ಲಿ ಏಲಂ ಮಾಡಲಾಗುತ್ತದೆ. ಮಧ್ಯರಾತ್ರಿ ಶ್ರೀ ದೇವರಿಗೆ ವಿಠುಮಾರು ಅಲಂಕಾರ ನಡೆಯಲಿದೆ.
ನ.13ರಂದು ಪ್ರಾತಕಾಲ 4 ಗಂಟೆಯಿಂದ ವಿಶೇಷ ದೀಪಾಲಂಕಾರ ಭೂವೈಕುಂಠ ದರ್ಶನ, 8 ಗಂಟೆಗೆ ಭಜನಾ ಸಪ್ತಾಹದ ಮಂಗಲ, ನಂತರ ಅವಭೃತ, ಮೊಸರವಲಕ್ಕಿ ಮಡಿಕೆ ಆಟ, ಮಧ್ಯಾಹ್ನ ಮಹಾ ನೈವೇದ್ಯ, ಮಹಾಪೂಜೆ ಬಳಿಕ ಮಹಾ ಸಮಾರಾಧನೆ, ಸಂಜೆ 7 ಗಂಟೆಗೆ ತುಳಸೀ ಪೂಜೆ ನೆರವೇರಲಿದೆ.
ಭಜನಾ ಸಪ್ತಾಹದ ಅಂಗವಾಗಿ ಶ್ರೀ ವೆಂಕಟರಮಣ ದೇವಳದ ಸಹಯೋಗದಲ್ಲಿ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಪ್ತಾಹ ಸಾಂತ್ ನಡೆಯಲಿದೆ. ಈ ಸಂದರ್ಭ ದಾಂಡಿಯಾ ಭಜನಾ ನೃತ್ಯವೂ ನಡೆಯಲಿದೆ. ಶ್ರೀ ದೇವಾಲಯದಲ್ಲಿ ಪಾದುಕಾ ಪೂಜೆಯೂ ನೆರವೇರಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.