ಮಂಗಳೂರು: ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ತಾಲೂಕು ಪಂಚಾಯಿತಿ ಎದುರು ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಮೊಬೈಲ್/ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುವ ಕಾರಣ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು. ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು. ರಜಾ ದಿನಗಳಲ್ಲೂ ಕೆಲಸ ನೀಡಬಾರದು ಎಂದು ಬೆಳ್ತಂಗಡಿ ಗ್ರಾಮ ಆಡಳಿತಾಧಿಕಾರಿ ಉಷಾ ಕಿರಣ್ ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಅಲ್ಮೆರಾ, ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್/ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕಾೃನರ್ ಕಲ್ಪಿಸಬೇಕು. ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲಾ ಬಗೆಯ ವರ್ಚುವಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಪ್ರ.ಕಾರ್ಯದರ್ಶಿ ಅನಿಲ್ ಕೆ. ಪೂಜಾರಿ ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ದಿನೇಶ್ ಕುಮಾರ್, ಜಿಲ್ಲಾ ಅಧ್ಯಕ್ಷ ಕೆ.ಸಂತೋಷ್, ತಾಲೂಕು ಅಧ್ಯಕ್ಷ ಉಮೇಶ್ ಬೆಡಸೂರು, ಉಪಾಧ್ಯಕ್ಷ ಮೆಹಬೂಬ್, ಕಾರ್ಯದರ್ಶಿ ಪ್ರೀತಿ, ಕ್ರೀಡಾ ಕಾರ್ಯದರ್ಶಿ ಕರುಣಾಕರ, ಖಜಾಂಚಿ ಪ್ರದೀಪ್ ಶೆಟಿ, ಸಾಂಸ್ಕೃತಿಕ ಕಾರ್ಯದರ್ಶಿ ನಿಧಿಶ್ರೀ ಸಾಲ್ಯಾನ್, ರಾಜ್ಯ ಪ್ರತಿನಿಧಿ ಅವಿನಾಶ್ ಮೊದಲಾದವರಿದ್ದರು.