ಮಂಗಳೂರು: ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
ವಿಎಚ್ ಪಿ ಮುಖಂಡ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ, ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ವಿರೋಧಿಸಿದ ಚಿನ್ಮಯ ಕೃಷ್ಣದಾಸ್ ಪ್ರಭು ಅವರನ್ನು ಬಾಂಗ್ಲಾ ಸರಕಾರ ಬಂಧಿಸಿದೆ. ಅವರೇನೂ ಮತಾಂತರ ಮಾಡಿಲ್ಲ, ಧರ್ಮ ವಿರೋಧಿ ಕೃತ್ಯ ಮಾಡಿಲ್ಲ. ಜನರನ್ನು ದಂಗೆಯೆಬ್ಬಿಸುವ ಕೃತ್ಯವನ್ನೂ ಮಾಡಿಲ್ಲ. ಹಿಂದುಗಳ ಮೇಲಿನ ಶೋಷಣೆ, ದಬ್ಬಾಳಿಕೆಯನ್ನು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೇ ಬಾಂಗ್ಲಾ ಸರ್ಕಾರ ಅವರನ್ನು ಬಂಧನ ಮಾಡಿದೆ, ನಾವಿದನ್ನು ಖಂಡಿಸುತ್ತೇವೆ. ಇಸ್ಲಾಮಿಕ್ ಮತಾಂಧರಿಂದ ಬಾಂಗ್ಲಾ ನಲುಗುತ್ತಿದ್ದು, ಹಿಂದುಗಳ ರಕ್ಷಣೆಗಾಗಿ ಭಾರತ ಸರ್ಕಾರ ಧ್ವನಿಯೆತ್ತಬೇಕು. ಅಲ್ಪಸಂಖ್ಯಾತ ಹಿಂದುಗಳನ್ನು ದಮನಿಸಲು ಮುಂದಾಗಿರುವ ಬಾಂಗ್ಲಾ ಸರ್ಕಾರವನ್ನು ಖಂಡಿಸಬೇಕು ಎಂದು ಪುರಾಣಿಕ್ ಆಗ್ರಹಿಸಿದರು.
ವಿಹಿಂಪ ಮುಖಂಡ ಶರಣ್ ಪಂಪುವೆಲ್, ಬಾಂಗ್ಲಾದಲ್ಲಿ ಹಿಂದುಗಳ ದಮನ ನೀತಿಯ ವಿರುದ್ಧ ನಾವು ಸರಣಿ ಪ್ರತಿಭಟನೆಗಳನ್ನು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲ ಸಾಧು, ಸಂತರನ್ನು ಒಳಗೊಳಿಸಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಮಂಗಳೂರಿನಲ್ಲಿ ಆಯೋಜಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಮಾಣಿಲ ಮೋಹನದಾಸ ಸ್ವಾಮೀಜಿ, ವಿಖ್ಯಾತಾನಂದ ಸ್ವಾಮೀಜಿ, ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ, ಶಿವಜ್ಞಾನಮಯಿ ಸರಸ್ವತಿ ಸೇರಿದಂತೆ ವಿಶ್ವ ಹಿಂದು ಪರಿಷತ್, ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.