ಜಿಲ್ಲೆ

ಉರ್ವ ಶ್ರೀ ಕೊರಗಜ್ಜ ಜನಸೇವಾ ಟ್ರಸ್ಟ್ ಸಹಾಯಧನ ವಿತರಣೆ 11 ಮಂದಿಗೆ ಒಟ್ಟು 3 ಲಕ್ಷ ರೂ., 15 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಮಂಗಳೂರು: ಉರ್ವ ಬಳಿಯ ಶ್ರೀ ಕೊರಗಜ್ಜ ಕ್ಷೇತ್ರದ ಶ್ರೀ ರಾಮ ಭಜನಾ ಮಂದಿರದ 28ನೇ ವಾರ್ಷಿಕ ಏಕಾಹ ಭಜನೋತ್ಸವದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಶ್ರೀ ಕೊರಗಜ್ಜ ಜನಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯ ಪೀಡಿತರಾದ 11 ಮಂದಿಗೆ ಒಟ್ಟು 3 ಲಕ್ಷ ರೂ. ಸಹಾಯ ಧನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದ.ಕ.ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 15 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸಹಾಯಧನ ವಿತರಿಸಿದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ, ಧಾರ್ಮಿಕ ಕ್ಷೇತ್ರದ ಆದಾಯದಲ್ಲಿ ನಿರ್ದಿಷ್ಟ ಮೊತ್ತವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿರುವ ಕೊರಗಜ್ಜ ಕ್ಷೇತ್ರದ ಆಡಳಿತ ಮಂಡಳಿಯ ಕಾರ್ಯ ಪ್ರಶಂಸನಾರ್ಹವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಸ್ಪಂದಿಸುವ ಕೊರಗಜ್ಜ ಜನಸೇವಾ ಟ್ರಸ್ಟಿನ ಕಾರ್ಯ ಮಾದರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಮಂಗಳೂರಿನ ಮೇಯರ್ ಮನೋಜ್ ಕುಮಾರ್, ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ಉರ್ವ ಯುಎಫ್‌ಸಿಎ ಸಂಘದ ಮಾಜಿ ಅಧ್ಯಕ್ಷ ವಿನಾಯಕ ಶಿವರಾಮ್, ವಾಲಿಬಾಲ್ ಪಟು ರೋಹಿತ್ ಹಾಗೂ ಅಂದದ ಕೈಬರಹ ಸ್ಪರ್ಧಾ ವಿಜೇತೆ ಪ್ರಕೃತಿ ಮನೋಹರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಅಶೋಕನಗರ-ಉರ್ವ ಬಂಟರ ಸಂಘದ ಅಧ್ಯಕ್ಷ ರವಿ ಶೆಟ್ಟಿ ಅಶೋಕನಗರ, ಬರ್ಕೆ ಫ್ರೆಂಡ್ಸ್‌ನ ಗೌರವ ಅಧ್ಯಕ್ಷ ಸುಚೀಂದ್ರ ಅಮೀನ್, ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಲ್ಲಾಳ್‌ಬಾಗ್, ಆಡಳಿತ ಸಮಿತಿಯ ದೇಜಪ್ಪ, ವಸಂತ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಕೊರಗಜ್ಜ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ರಾಜೇಶ್ ಉರ್ವ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.