ವಿಜಯವಾಣಿ ಸುದ್ದಿಜಾಲ ಉಡುಪಿ
ಜ್ಞಾನ, ತ್ಯಾಗ, ಭಕ್ತಿ, ಶಕ್ತಿ ಹಾಗೂ ಗುರಿಯ ಪ್ರತಿಕನಾದ ಹನುಮಂತನ ಪ್ರಾಣಶಕ್ತಿ ಮಂಗಳೂರು ಹಾಗೂ ಮುಂಬಯಿ ಯುನಿವರ್ಸಿಟಿಯ ಖೋ-ಖೋ ಕ್ರೀಡೆಯ ವಿದ್ಯಾರ್ಥಿಗಳಿಗೆ ಲಭಿಸಿದೆ. ಮಹಾರಾಷ್ಟ್ರದಲ್ಲಿ ಜನಿಸಿದ ಈ ಕ್ರೀಡೆ ದೇಸೀಯ ಆಟವಾಗಿದ್ದು ಹೆಮ್ಮೆಯ ಪ್ರತೀಕವಾಗಿದೆ. ಒಲಿಂಪಿಕ್ನಲ್ಲೂ ಖೋ-ಖೋ ಸೇರ್ಪಡೆಗೊಳ್ಳಬೇಕು. ವಿಶ್ವದಲ್ಲಿಯೇ ಭಾರತ ದೊಡ್ಡ ಹೆಮ್ಮೆ, ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು.
ಪ್ರೊ.ಡಾ. ಎ.ಪಿ. ಭಟ್, ಸಿಎ ಟಿ.ಪ್ರಶಾಂತ ಹೊಳ್ಳ, ಗಣೇಶ ಹೆಬ್ಬಾರ, ಪಿಐಎಂನ ನಿರ್ದೇಶಕ ಡಾ. ಪಿ.ಶ್ರೀರಮಣ ಐತಾಳ, ಡಾ. ಪಿ.ಶ್ರೀನಿವಾಸ ಐತಾಳ, ಗೋಪಾಲ ಶಬರಾಯ, ಮುನಿಯಾಲು ಉದಯಕುಮಾರ ಶೆಟ್ಟಿ, ಸಿಎ ಜಿ. ವಿ. ಕೃಷ್ಣ, ಪ್ರಾಂಶುಪಾಲ ಡಾ.ರಾಮು ಎಲ್. ಇತರರು ಉಪಸ್ಥಿತರಿದ್ದರು.
ಸಂಪ್ರೀತಾ, ಸಂಪ್ರದಾ ಪ್ರಾರ್ಥಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ ಸ್ವಾಗತಿಸಿದರು. ಡಾ.ಜೆರಾಲ್ಡ್ ಸಂತೋಷ ಡಿಸೋಜಾ ವರದಿ ವಾಚಿಸಿದರು. ಕಾಲೇಜಿನ ದೈಹಿಕ ವಿಭಾಗದ ನಿರ್ದೇಶಕ ಸುಕುಮಾರ ವಂದಿಸಿದರು. ಅಪೂರ್ವಾ ಓಸ್ತಾ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಾರೆ ಸರ್ಕಾರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಕೆ. ವಿಜೇತ ತಂಡಗಳ ಪಟ್ಟಿ ವಾಚಿಸಿದರು.
ಪಂದ್ಯಾವಳಿಯಲ್ಲಿ ಮಂಗಳೂರಿನ ಮಂಗಳೂರು ವಿವಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಮುಂಬಯಿಯ ಮುಂಬಯಿ ಯುನಿವರ್ಸಿಟಿ ತಂಡ ದ್ವಿತೀಯ ಸ್ಥಾನ ಗೆದ್ದುಕೊಂಡಿತು. ಮಹಾರಾಷ್ಟ್ರ ರಾಜ್ಯದ ನಾಂದೇಡದ ಸ್ವಾಮಿ ರಮಾನಂದ ತೀರ್ಥ ಮರಾಠಾವಾಡ ಯುನಿವರ್ಸಿಟಿ ಹಾಗೂ ಸಂಭಾಜಿನಗರದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಮರಾಠಾವಾಡಾ ಯುನಿವರ್ಸಿಟಿ ತೃತೀಯ ಸ್ಥಾನ ಗೆದ್ದುಕೊಂಡಿತು. ಬೆಸ್ಟ್ ಡಿಫೆಂಡರ್- ನಿಖಿಲ್ ಬಿ. (ಮಂಗಳೂರು ತಂಡ), ಬೆಸ್ಟ್ ಚೇಸರ್- ದೀಕ್ಷಿತ್ (ಮಂಗಳೂರು), ಬೆಸ್ಟ್ ಆಲ್ ರೌಂಡರ್- ಆಕಾಶ ಕದಂ (ಮುಂಬಯಿ ತಂಡ). ವಿಜೇತ ತಂಡಗಳಿಗೆ ಹಾಗೂ ವೈಯಕ್ತಿಕ ಸಾಧಕರಿಗೆ ಬಹುಮಾನ ವಿತರಿಸಲಾಯಿತು.
ಶಕ್ತಿ-ಭಕ್ತಿಯ ಪ್ರತೀಕನಾದ ಹನುಮನ ಜಯಂತಿಯಂದು ಮಂಗಳೂರು ತಂಡ ವಿಜೇತರಾಗಿರುವುದು ಅತ್ಯಂತ ಅರ್ಥಪೂರ್ಣ ಹಾಗೂ ಭಾವನಾತ್ಮಕ ಸಂದರ್ಭವಾಗಿದೆ. ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ಕಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ಜಾಗತಿಕ ಮಟ್ಟದಲ್ಲಿ ಕ್ರೀಡಾಪಟುಗಳು ಸಾಧನೆ ಮಾಡುವಂತಾಗಲು ಪ್ರಧಾನಿ ನರೇಂದ್ರ ಮೋದಿ ಅವಕಾಶ, ಸೌಲಭ್ಯ ಒದಗಿಸಿದ್ದಾರೆ. | ಯಶ್ಪಾಲ್ ಸುವರ್ಣ. ಶಾಸಕ ಉಡುಪಿಯ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಉತ್ತಮ ವಿದ್ಯಾಲಯವಾಗಿದ್ದು ಮುಂದಿನ ದಿನಗಳಲ್ಲಿ ಯುನಿವರ್ಸಿಟಿಯಾಗಿ ರೂಪುಗೊಳ್ಳಲಿ. ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಮಿಂಚುವ ಅನೇಕ ಹೀರೋಗಳಾಗಿದ್ದಾರೆ. ಆದರೆ, ಆ ಹಿರೋತನ ಉಳಿಸಿಕೊಳ್ಳಲು ನಿರಂತರ ಶ್ರಮ ಅಗತ್ಯ. ಕ್ರೀಡಾಕ್ಷೇತ್ರದಲ್ಲಿ ಇದೀಗ ವಿಪುಲ ಅವಕಾಶವಿದ್ದು ಯುವಕರು ಸದುಪಯೋಗ ಮಾಡಿಕೊಳ್ಳಬೇಕು. | ಕೆ.ಜಯಪ್ರಕಾಶ ಹೆಗ್ಡೆ. ಮಾಜಿ ಸಂಸದ