ಜಿಲ್ಲೆ

ರಾಜ್ಯಶಾಸ ಅಧ್ಯಯನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿ ಮಂಗಳೂರು ವಿವಿ ರಾಜ್ಯಶಾಸ್ತ್ರ ಹಳೇ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಪ್ರೊ.ಪಿ.ಎಲ್.ಧರ್ಮ

ಹರೀಶ ಎಂ.

ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ರಾಜ್ಯಶಾಸ ವಿಭಾಗವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ವಿಭಾಗದ ಹಳೇ ವಿದ್ಯಾರ್ಥಿ ಸಂಘ ಆರಂಭಗೊಂಡಿದ್ದು, ಇದನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಸಂಘಟಿಸಬೇಕು. ವಿದ್ಯಾರ್ಥಿಗಳು ಕೂಡಾ ರಾಜ್ಯಶಾಸ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.


ಭಾನುವಾರ ಮಂಗಳೂರು ವಿಶ್ವ ವಿದ್ಯಾಲಯ ರಾಜ್ಯಶಾಸ ವಿಭಾಗದ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ವಿಶ್ವ ವಿದ್ಯಾಲಯದಲ್ಲಿ ಅನೇಕ ಸವಾಲುಗಳಿವೆ. ಆಡಳಿತಾತ್ಮಕವಾಗಿ ಸರಿಪಡಿಸಬಹುದಾದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಅನೇಕ ಕಾಲೇಜುಗಳಲ್ಲಿ ಮುಚ್ಚಿ ಹೋಗಿರುವ ಕಲಾ ವಿಭಾಗವನ್ನು ಮರು ಆರಂಭಿಸಲು ಪ್ರಯತ್ನಪಡುತ್ತೇನೆ. 1.80ಲಕ್ಷಕ್ಕೂ ಅಧಿಕ ಮಂದಿ ವಿವಿ ಪ್ಯಾಪ್ತಿಯ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿದ್ದು, ಅವರೆಲ್ಲರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಮಟ್ಟದಲ್ಲೂ ಆಗಬೇಕಿರುವ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನಪಟ್ಟು ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು.


ಮಂಗಳೂರು ವಿಶ್ವವಿದ್ಯಾಲಯ ರಾಜ್ಯಶಾಸ ವಿಭಾಗದ ಹಾಗೂ ನವದೆಹಲಿಯ ರಾಜ್ಯಶಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ವಲೇರಿಯನ್ ರೋಡ್ರಿಗಸ್ ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯಶಾಸ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಕೇವಲ ಬೋಧನಾ ವೃತ್ತಿ ಮಾತ್ರವಲ್ಲದೆ, ಅನೇಕ ಅವಕಾಶಗಳಿವೆ. ಅವುಗಳನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಹಳೇ ವಿದ್ಯಾರ್ಥಿ ಸಂಘಕ್ಕೆ ಬೇಕಾದ ಎಲ್ಲ ರೀತಿಯ ನೆರವು, ಸಲಹೆಗಳನ್ನು ನೀಡಲು ನಾನು ಬದ್ಧ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಜೆ.ಎಸ್.ಸದಾನಂದ, ಪ್ರೊ.ರಾಜಾರಾಮ ತೋಳ್ಪಾಡಿ, ಮಂಗಳೂರು ವಿವಿ ರಾಜ್ಯಶಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಜಯರಾಮ್ ಅಮೀನ್ ಮಾತನಾಡಿದರು. ಸಂಘದ ಖಜಾಂಜಿ ಪ್ರವೀಣ್ ಬಂಗೇರ ಉಪಸ್ಥಿತರಿದ್ದರು.


ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡಿರುವ ಪ್ರೊ.ಪಿ.ಎಲ್.ಧರ್ಮ, ರಾಜ್ಯಶಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ವಲೇರಿಯನ್ ರೋಡ್ರಿಗಸ್, ಪ್ರೊ.ಜೆ.ಎಸ್.ಸದಾನಂದ, ಪ್ರೊ.ರಾಜಾರಾಮ ತೋಳ್ಪಾಡಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಝೇವಿಯರ್ ಡಿಸೋಜ, ವಿಭಾಗದ ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಂಜುನಾಥ ಹಾಗೂ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ವಿಶ್ವ ವಿದ್ಯಾಲಯ ರಾಜ್ಯಶಾಸ ವಿಭಾಗದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಝೇವಿಯರ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ.ದಯಾನಂದ್ ನಾಯ್ಕ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಪತ್ರಕರ್ತ ಆರ್.ಸಿ.ಭಟ್ ಹಾಗೂ ಡಾ.ರೋಸ್ ವೀರಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.