ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಆಡಿಟೋರಿಯಂನಲ್ಲಿ ಪ್ರತಿ ವರ್ಷದಂತೆ ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದಿಂದ ಆಚರಿಸಿಕೊಂಡು ಬರುತ್ತಿದ್ದ ಗಣೇಶೋತ್ಸವವನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದೆಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಶಾಸಕರ ನೇತೃತ್ವದಲ್ಲಿ, ಮಾಜಿ ಸಿಂಡಿಕೇಟ್ ಸದಸ್ಯ ರಮೇಶ್ ಕೆ, ಭಾರತೀಯ ಜನತಾ ಪಾರ್ಟಿ ಮುಖಂಡರಾದ ಸಂತೋಷ್ ಬೋಳ್ಯಾರು, ಎಬಿವಿಪಿ ಜಿಲ್ಲಾ ಸಂಚಾಲಕ ಶ್ರೇಯಸ್ ಶೆಟ್ಟಿ, ವಿವಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಇಶಿಕ ಮತ್ತು ಉಪಾಧ್ಯಕ್ಷೆ ತ್ರಿವೇಣಿ ಇವರ ನಿಯೋಗವು ಕುಲಪತಿ ಪ್ರೊ ಜಯರಾಜ್ ಅಮೀನ್ ಮತ್ತು ಕುಲಸಚಿವ ಪ್ರೊ. ಕೃಷ್ಣರಾಜು ಚಲನ್ನವರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿ ಮನವಿ ಸಲ್ಲಿಸಿದೆ.
ಈ ಹಿಂದೆ 20-12-2022 ರಂದು ಸಿಂಡಿಕೇಟ್ ಸಭೆಯಲ್ಲಿ ವಿದ್ಯಾರ್ಥಿ ಸಂಘದ ಮನವಿಯಂತೆ ಪ್ರತಿ ವರ್ಷವೂ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಮೇಲುಸ್ತುವಾರಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕುಲಪತಿಯವರು ಮುಖ್ಯಮಂತ್ರಿಯವರ ಮೌಖಿಕ ಆದೇಶದ ಮೇರೆಗೆ ಯಾವುದೇ ಧಾರ್ಮಿಕ ಕಾರ್ಯಕ್ರಮ ಆಚರಿಸಬಾರದೆಂದು ಸೂಚಿಸಿರುತ್ತಾರೆ. ಆದ್ದರಿಂದ ಈ ವರ್ಷ ಮಂಗಳ ಆಡಿಟೋರಿಯಂನಲ್ಲಿ ಗಣೇಶ ಪೂಜೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.
ಸಿಂಡಿಕೇಟ್ ನಿರ್ಣಯಕ್ಕೆ ವಿರುದ್ಧವಾಗಿ ಕುಲಪತಿಯವರು ಏಕಪಕ್ಷೀಯ ನಿರ್ಣಯ ಕೈಗೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಯಾವುದೇ ಸಿಂಡಿಕೇಟ್ ನೀರ್ಣಯವು ಕುಲಾಧಿಪತಿಗಳಾದ ರಾಜ್ಯಪಾಲರ ದೃಢೀಕರಣದೊಂದಿಗೆ ಅಂಗೀಕಾರವಾದ ತೀರ್ಮಾನವಾಗಿರುತ್ತದೆ. ಆದರೆ ಕುಲಪತಿಯವರು ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಣಯವನ್ನು ತಡೆಯದೆ ಹಾಗೂ ರಾಜ್ಯಪಾಲರ ಗಮನಕ್ಕೆ ತಾರದೆ, ಈಗ ವಿದ್ಯಾರ್ಥಿ ನಿಲಯದಲ್ಲಿ ಗಣೇಶೋತ್ಸವ ನಡೆಸಿ ಎನ್ನುತ್ತಿರುವುದು ಸಮರ್ಥನೀಯವಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ಹಣದಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವುದು ರೂಢಿಯಾಗಿದೆ. ಆದರೆ ಈ ವರ್ಷ ವಿವಿ ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಈ ಹಣವನ್ನು ಬಳಕೆ ಮಾಡದೆ, ಸಣ್ಣ ಮಟ್ಟದಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಗಣೇಶೋತ್ಸವ ಆಚರಿಸೋಣ ಎಂದು ಕುಲಪತಿಗಳು ಶಾಸಕರ ನೇತೃತ್ವದ ನಿಯೋಗಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು.
ಆದರೆ ವಿವಿಯ ವಿದ್ಯಾರ್ಥಿ ಮುಖಂಡರು ಪ್ರತಿ ವರ್ಷದಂತೆ ಈ ವರ್ಷವೂ ಸಿಂಡಿಕೇಟ್ ನಿರ್ಣಯವನ್ನು ಪಾಲನೆ ಮಾಡಬೇಕೆಂದು ಆಗ್ರಹಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಮಂಗಳ ಆಡಿಟೋರಿಯಂನಲ್ಲೇ
ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸಬೇಕು. ಈ ಕುರಿತು ಸೆ.2 ರಂದು ಶನಿವಾರ ಸಂಜೆಯೊಳಗೆ ನಿರ್ಣಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಹಾಗೂ ಹಿಂದೂ ಸಮಾಜವು ಪ್ರತಿ ಹಂತದಲ್ಲಿಯೂ ಹೋರಾಟವನ್ನು ಸಂಘಟಿಸುವುದಾಗಿ ಎಚ್ಚರಿಕೆಯನ್ನು ನೀಡಲಾಯಿತು.